ಜಿಲ್ಲೆ

ನವೀಕರಣಗೊಂಡ ಶಾಲೆಯ ಕಟ್ಟಡ ಲೋಕಾರ್ಪಣೆ

ಹುಬ್ಬಳ್ಳಿ : ಶ್ರೀ ಜಗದ್ಗುರು ಮೂರುಸಾವಿರಮಠದ ವಿದ್ಯಾವರ್ಧಕ ಸಂಘದ ವತಿಯಿಂದ ಶ್ರೀ ಜಗದ್ಗುರು ಗಂಗಾಧರ ಪ್ರೌಢಶಾಲೆ ಆವರಣದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ನವೀಕರಣಗೊಂಡ ಶಾಲಾ ಕಟ್ಟಡದ ಲೋಕಾರ್ಪಣಾ ಸಮಾರಂಭ ಆ. 29ರಂದು ಬೆಳಗ್ಗೆ 10 ಗಂಟೆಗೆ ಜರುಗಲಿದೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶಾಲೆಯ ಪ್ರಾಚಾರ್ಯರಾದ ಅಂಜಲಿ ಕರಬಸವಣ್ಣವರ, ಶ್ರೀಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಚಿಕ್ಕಮಕ್ಕಳ ತಜ್ಞ ಡಾ. ವೀರಣ್ಣ ಮುಧೋಳ ಅಧ್ಯಕ್ಷತೆ ವಹಿಸುವರು ಎಂದರು.

ಶಾಸಕ ಮಹೇಶ ಟೆಂಗಿನಕಾಯಿ, ಎಸ್​ಜೆಎಂವಿಎಸ್ ಗೌರವ ಕಾರ್ಯದರ್ಶಿ ಅರವಿಂದ ಕುಬಸದ ಅತಿಥಿಗಳಾಗಿದ್ದು, ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಶಾಲೆಯ ಹಳೆಯ ವಿದ್ಯಾರ್ಥಿಗಳು ಭಾಗವಹಿಸುವರು ಎಂದು ಹೇಳಿದರು.

ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಮಹಾದೇವ ಬೂದಪ್ಪನವರ, ವಿಜಯ ಮಲ್ಲಣ್ಣವರ, ಗುರು ಬನ್ನಿಕೊಪ್ಪ, ರುದ್ರಪ್ಪ ನೆಲೋಗಲ್ಲ ಸುದ್ದಿಗೋಷ್ಠಿಯಲ್ಲಿ ಇದ್ದರು.