ಉಪ್ಪಿನಂಗಡಿ: ಸಮಾಜದಲ್ಲಿ ಇಂದು ಬಹಳಷ್ಟು ಮಂದಿ ವಿದ್ಯಾವಂತರು, ವಿಚಾರವಂತರು ಸಿಗುತ್ತಾರೆ. ಆದರೆ ಆಚಾರವಂತರ ಕೊರತೆ ಕಾಣಿಸುತ್ತಿದೆ. ಇದು ವಿಷಾದನೀಯ. ವಿದ್ಯೆ ಇದ್ದರೆ ಎಲ್ಲಿಯೂ ಬದುಕಬಹುದು, ಆದರೆ ಆಚಾರ ಇಲ್ಲದ ಬದುಕು ಸಾರ್ಥಕ ಆಗಲಾರದು ಎಂದು ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಗೌರವ ಕಾರ‌್ಯದರ್ಶಿ ಹರ್ಷೇಂದ್ರ ಕುಮಾರ್ ಹೇಳಿದರು.
ಬಜತ್ತೂರು ಗ್ರಾಮದ ಕಾಂಚನದಲ್ಲಿರುವ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಅಡಳಿತಕ್ಕೊಳಪಟ್ಟ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕಟ್ಟಡ ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಮೊಬೈಲ್‌ನಿಂದ ದೂರ ಇರಿಸಿದರೆ ವಿದ್ಯಾರ್ಥಿಗಳಿಂದ ಮತ್ತಷ್ಟು ಸಾಧನೆ ನೀರೀಕ್ಷಿಸಬಹುದಾಗಿದೆ ಎಂದರು.
ಶಾಲೆಯ ಸಂಸ್ಥಾಪಕ ಕುಟುಂಬದ ಸದಸ್ಯೆ ರೋಹಿಣಿ ಸುಬ್ಬರತ್ನಂ ಶುಭಹಾರೈಸಿದರು. ಹರ್ಷೇಂದ್ರ ಕುಮಾರ್ ಪತ್ನಿ ಸುಪ್ರಿಯಾ ಹರ್ಷೇಂದ್ರ, ಶಾಲಾ ಶಿಕ್ಷಕ - ರಕ್ಷಕ ಸಂಘ ಅಧ್ಯಕ್ಷೆ ಮಧುಶ್ರೀ ಯಾದವ ಗೌಡ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಮೇಶ್ ಮಯ್ಯ, ಕಟ್ಟಡ ಕಾಮಗಾರಿ ಇಂಜಿನಿಯರ್ ಯಶೋಧರ, ಗುತ್ತಿಗೆದಾರ ಅಬ್ದುಲ್ಲ ಮೊದಲಾದವರಿದ್ದರು. ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ‌್ಯದರ್ಶಿ ಸತೀಶ್ಚಂದ್ರ ಎಸ್. ಸ್ವಾಗತಿಸಿದರು. ಉಪನ್ಯಾಸಕ ಮೋಹನ್‌ಚಂದ್ರ ನಿರೂಪಿಸಿದರು. ಮುಖ್ಯ ಶಿಕ್ಷಕ ಎ.ಲಕ್ಷ್ಮಣ ಗೌಡ ವಂದಿಸಿದರು.
ಶಾಲಾ ಸ್ಥಾಪನೆ ಮತ್ತು ಅದರ ಬಳಿಕ ಎದುರಿಸುತ್ತಿದ್ದ ಸಮಸ್ಯೆಗಳನ್ನು ಮನಗಂಡು ಧರ್ಮಸ್ಥಳ ಸಂಸ್ಥೆಯನ್ನು ಕೇಳಿಕೊಂಡಿದ್ದು, ಇದೀಗ ಶಾಲೆ ಬಹಳಷ್ಟು ಅಭಿವೃದ್ಧಿ ಹೊಂದುತ್ತಿರುವುದು ಸಂತೋಷ ತಂದಿದೆ.
ರೋಹಿಣಿ ಸುಬ್ಬರತ್ನಂ ಶಾಲಾ ಸಂಸ್ಥಾಪಕ ಕುಟುಂಬದ ಸದಸ್ಯೆ