ಬದಿಯಡ್ಕ: ವೈಯಕ್ತಿಕವಾಗಿ ಗುರುತಿಸಿಕೊಳ್ಳುವಂಥ ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳು ನೀವಾಗಬೇಕು. ಗುಣಮಟ್ಟದ ಶಿಕ್ಷಣ, ಅದಕ್ಕೆ ಪೂರಕವಾದ ಸಾಧನೆ ಮಾಡುವ ವಿದ್ಯಾರ್ಥಿಗಳು ಜತೆಯಾದಾಗ ಆ ಶಿಕ್ಷಣ ಸಂಸ್ಥೆ ಬೆಳಗುತ್ತದೆ ಎಂದು ಕೇರಳ ಚಿನ್ಮಯ ಮಿಷನ್‌ನ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಹೇಳಿದರು.
ಶುಕ್ರವಾರ ಬದಿಯಡ್ಕ ಚಿನ್ಮಯ ವಿದ್ಯಾಲಯದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಹೊಸತಾಗಿ ನಿರ್ಮಿಸಿದ ವಿದ್ಯಾರ್ಥಿ ಪಾರ್ಕ್‌ನ್ನು ಉದ್ಘಾಟಿಸಿ ಚೆಂಗಳ ಗ್ರಾಪಂ ಅಧ್ಯಕ್ಷ ಖಾದರ್ ಬದ್ರಿಯಾ ಮಾತನಾಡಿ, ಬಹುಭಾಷಾ ಸಂಗಮ ಭೂಮಿಯಾದ ಕಾಸರಗೋಡು ಜಿಲ್ಲೆಯಲ್ಲಿ ಎಲ್ಲ ಭಾಷೆ ವಿದ್ಯಾರ್ಥಿಗಳು ಇರಬೇಕು. ಮೊಬೈಲ್ ಬಳಕೆಯಿಂದ ದೂರವಿದ್ದು, ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದರು.
ಬದಿಯಡ್ಕ ಗ್ರಾಪಂ ಅಧ್ಯಕ್ಷೆ ಶಾಂತಾ ನೂತನ ಲ್ಯಾಬ್ ಉದ್ಘಾಟಿಸಿದರು. ನಗರಸಭೆ ಸದಸ್ಯೆ ಸವಿತಾ ಕೋಳಾರಿ ಹಾಗೂ ಚಿನ್ಮಯ ಮಿಷನ್ ಕಾರ್ಯದರ್ಶಿ ಬಾಲಚಂದ್ರನ್ ಉಪಸ್ಥಿತರಿದ್ದರು. ಶಾಲಾ ಕಟ್ಟಡದ ಅಭಿಯಂತ ಗೋವಿಂದ, ನಿರ್ಮಾಣಕ್ಕಾಗಿ ಸಹಕರಿಸಿದ ಶಾಲೆ ಆಡಳಿತ ಸಹಾಯಕ ಧೀರಜ್ ಹಾಗೂ ಕಾಸರಗೋಡು ಚಿನ್ಮಯ ವಿದ್ಯಾಲಯದ ಕ್ಯಾಂಪಸ್ ಪ್ರಬಂಧಕ ಗಣೇಶ್ ನಾಯರ್ ಅವರನ್ನು ಸನ್ಮಾನಿಸಲಾಯಿತು.
ಕಳೆದ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಾಲೆ ಮೇಲ್ವಿಚಾರಕ ಪ್ರಶಾಂತ್ ಬೆಳಿಂಜ ಸ್ವಾಗತಿಸಿ, ಮುಖ್ಯಶಿಕ್ಷಕಿ ಮಾನಸಾ ವಂದಿಸಿ, ಶಿಕ್ಷಕಿ ಚಂದ್ರಕಲಾ ನಿರೂಪಿಸಿದರು.