ಜಿಲ್ಲೆ

ಮೈಸೂರು ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಪಾರಂಪರಿಕ ಕೂಟದ ಉದ್ಘಾಟನೆ

ಮೈಸೂರು: ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ‘ನಮ್ಮ ಪರಂಪರೆ ನಮ್ಮ ಹೆಮ್ಮೆ’ ವಿಷಯದ ಕುರಿತು ಉಪನ್ಯಾಸ ಹಾಗೂ ಪಾರಂಪರಿಕ ಕೂಟದ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಮತ್ತು ಪುರಾತತ್ವ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಎನ್.ಎಸ್. ರಂಗರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯವು ಸಂಸ್ಕೃತಿ ಮತ್ತು ಪರಂಪರೆಯ ಘನತೆಯನ್ನು ಕಾಪಾಡಿಕೊಂಡು ಬರುತ್ತಿದ್ದು, ಮೈಸೂರಿನಲ್ಲಿ ಪಾರಂಪರಿಕ ನಡಿಗೆ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸುತ್ತ ಪರಂಪರೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಪರಂಪರೆಯಲ್ಲಿ ನಾಲ್ಕು ವಿಧಗಳಿದ್ದು, ನೈಸರ್ಗಿಕವಾಗಿ ರಚನೆಗೊಂಡಿರುವ ಸ್ವಾಭಾವಿಕ ಪರಂಪರೆ, ಮಾನವ ನಿರ್ಮಿತ ಐತಿಹಾಸಿಕ ಮತ್ತು ಪುರಾತತ್ವ ಪರಂಪರೆ, ಸಾಂಸ್ಕೃತಿಕ ಪರಂಪರೆ ಹಾಗೂ ಜೀವವೈವಿಧ್ಯ ಪರಂಪರೆಯನ್ನು ಇಂದಿನ ಯುವಜನತೆ ಸಂರಕ್ಷಿಸಬೇಕಾಗಿದೆ ಎಂದು ತಿಳಿಸಿದರು.

ಕರ್ನಾಟಕವು ಪ್ರಮುಖ ಪಾರಂಪರಿಕ ರಾಜ್ಯವಾಗಿದ್ದು, ನಮ್ಮ ರಾಜ್ಯದಲ್ಲಿ 36,000 ಪಾರಂಪರಿಕ ಕಟ್ಟಡಗಳಿದ್ದು, ಅವುಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆಗೂಡಿ ಸುಮಾರು 1500 ಪಾರಂಪರಿಕ ಕಟ್ಟಡಗಳನ್ನು ಗುರುತಿಸಿವೆ. ಯುನೆಸ್ಕೊ ನಾಲ್ಕು ಪಾರಂಪರಿಕ ಸ್ಥಳಗಳನ್ನು ಗುರುತಿಸಿದ್ದು ಅವುಗಳಲ್ಲಿ ಮೂರು ಐತಿಹಾಸಿಕ ಪಾರಂಪರಿಕ ತಾಣ ಮತ್ತು ಒಂದು ನೈಸರ್ಗಿಕ ಪಾರಂಪರಿಕ ತಾಣ ಎಂದು ಹೇಳಿದರು. ವೇದಿಕೆಯಲ್ಲಿ ಪ್ರಾಂಶುಪಾಲ ಡಾ. ರೇಚಣ್ಣ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎ.ಜಿ. ಧರ್ಮೇಶ ಹಾಗೂ ಇತರರು ಇದ್ದರು.