ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ
ಚಾಂದ್ರ ಜನ್ಮಾಷ್ಟಮಿ ನಿಮಿತ್ತ ಸುವರ್ಣ ಪಥ ಉದ್ಘಾಟನೆ
ಶ್ರೀಕೃಷ್ಣ ದೇವರಲ್ಲ, ಆತ ಮನುಷ್ಯ ಎಂದು ಅನೇಕರು ಆಕ್ಷೇಪ ಮಾಡುತ್ತಾರೆ. ಆದರೆ, ಶ್ರೀಕೃಷ್ಣನ ಜನನ ಮನುಷ್ಯರಂತೆ ಆಗಿಲ್ಲ. ಯಾವ ಶಿಶುವೂ ಸಹ ಜನಿಸುವಾಗ ಆಭರಣ ಧರಿಸಿರುವುದಿಲ್ಲ, ಚತುರ್ಭುಜನಾಗಿ ಶಂಖ-ಚಕ್ರ-ಗಧೆಯಂತಹ ಆಯುಧ ಧರಿಸಿಯೇ ಯಾರೂ ಸಹ ಜಗತ್ತಿನಲ್ಲಿ ಈವರೆಗೆ ಜನಿಸಿಲ್ಲ. ಬಾಯಲ್ಲಿ ಯಾರೂ ಬ್ರಹ್ಮಾಂಡವನ್ನೂ ತೋರಿಸಿಲ್ಲ. ಕಂಸರಾದಿಯಾಗಿ ದುಷ್ಟ ರಕ್ಕಸರ ಸಂಹಾರಕ್ಕಾಗಿ ಹಾಗೂ ಸಮಸ್ತ ಮನುಕುಲದ ಉದ್ಧಾರಕ್ಕಾಗಿಯೇ ಭಗವಾನ್ ವಿಷ್ಣುವೇ ಸ್ವಯಂ ಕೃಷ್ಣನಾಗಿ ಜನಿಸಿದ್ದಾನೆ ಎಂದು ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಮಂಡಲೋತ್ಸವ ಸಂದರ್ಭದಲ್ಲಿ ಹಾಗೂ ಚಾಂದ್ರ ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ನಿರ್ಮಿಸಿರುವ ಸುವರ್ಣ ಪಥ ಉದ್ಘಾಟನೆಯ ಬಳಿಕ ರಾಜಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಭಕ್ತಿಯೇ ಜೀವನದ ಮೂಲ
ಸುವರ್ಣ ಪಥ ಉದ್ಘಾಟಿಸಿದ ಅಯೋಧ್ಯಾ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಕೋಶಾಧ್ಯಕ್ಷ ಹಾಗೂ ಮಥುರಾ ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ನ ಉಪಾಧ್ಯಕ್ಷ ಸ್ವಾಮಿ ಗೋವಿಂದ ಗಿರಿ ಮಹಾರಾಜ್ ಮಾತಾನಾಡಿ, ಅಹಂಕಾರಿಗಳಿಗೆ ಎಂದಿಗೂ ದೇವರ ಒಲುಮೆ ಲಭಿಸದು. ಕಾಮ, ಕ್ರೋಧ, ಮೋಹ, ಲೋಭ, ಮದ-ಮತ್ಸರಗಳೆಂಬ ದುಷ್ಟಕೂಟಗಳಿಗೆ ಅಂಹಕಾರವೇ ಸೇನಾಧಿಪತಿ. ಅಹಂಕಾರ ಕರಗಬೇಕೆಂದರೆ ನಿರಾಕಾರನಾದ ಭಗವಂತನ ಮೊರೆ ಹೋಗಬೇಕು. ಭಕ್ತಿಯಿಲ್ಲದ ಜೀವನ ನಶ್ವರ. ಭಕ್ತಿಯೇ ಜೀವನದ ಮೂಲ ಎಂದರು.
ಪ್ರಶಸ್ತಿ ಪ್ರದಾನ
ಸ್ವಾಮಿ ಗೋವಿಂದ ಗಿರಿ ಅವರಿಗೆ ರಾಮಕೃಷ್ಣ ಮಂದಿರ ಧುರಂಧರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಶ್ರೀಂದ್ರ ಶ್ರೀ ಸಾನ್ನಿಧ್ಯ ವಹಿಸಿದ್ದರು. ವಿದ್ವಾನ್ ಷಣ್ಮುಖ ಆಚಾರ್ಯ ಪ್ರಶಸ್ತಿ ವಾಚಿಸಿದರು.
ಕಾರ್ಯಕ್ರಮಕ್ಕೂ ಮೊದಲು ನೌಕಾದಳದ ನಿವೃತ್ತ ಯೋಧರು, ಎನ್ಸಿಸಿ ಹಾಗೂ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಮಠದ ಭಕ್ತರು ಜನ್ಮಾಷ್ಟಮಿಯ ನಿಮಿತ್ತ ರಥಬೀದಿಯಲ್ಲಿ ಶೋಭಾಯಾತ್ರೆ ನಡೆಸಿದರು. ಕೃಷ್ಣ ಗೀತಾ ವೃಂದದಿಂದ ಭಗವದ್ಗೀತೆಯ ಆಯ್ದ ಶ್ಲೋಕಗಳ ಗಾಯನ ನಡೆಯಿತು. ಕೃಷ್ಣ ಪ್ರೀತ್ಯರ್ಥವಾಗಿ ಮಕ್ಕಳಿಂದ ಕೋಲಾಟ ನೃತ್ಯ ನಡೆಯಿತು.
ಜಿಲ್ಲಾ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಆಯುಕ್ತ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಕಮಾಂಡಿಂಗ್ ಆಫೀಸರ್ ಕಾರವಾರ ನೇವಲ್ ಬೇಸ್ನ ಎನ್ಸಿಸಿ ಉಡುಪಿಯ ಕಮಾಂಡರ್ ಅಶ್ವಿನ್ ಎಂ. ರಾವ್, ಮಧ್ಯ ಪ್ರದೇಶದ ಮೆಡಿಕಲ್ ಆಫೀಸರ್ ಮೇಜರ್ ಕಾರ್ತಿಕೇಶ ಐತಾಳ ಯು., ಉಡುಪಿ ಜಿಲ್ಲಾ ಮಾಜಿ ಸೈನಿಕರ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ನಿವೃತ್ತ ಕರ್ನಲ್ ಎಎ್ಇ ರೋಡ್ರಿಗಸ್, ಉಡುಪಿಯ ಮಾಜಿ ಸೈನಿಕರ ವೇದಿಕೆಯ ಅಧ್ಯಕ್ಷ ನಿವೃತ್ತ ಸುಬೇದಾರ ಮೇಜರ್ ಗಣಪಯ್ಯ ಶೇರಿಗಾರ್, ಉಡುಪಿ-ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ಅರೆ ಸೇನಾ ಪಡೆಯ ಯೋಧರ ಸಂಘದ ಗೌರವಾಧ್ಯಕ್ಷ ರಾಜೇಶ್ ಮೆಂಡನ್, ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೇಶವ ಮಲ್ಪೆ, ಟಿಟಿಡಿಯ ಕನ್ನಡ ವಾಹಿನಿಯ ಮುಖ್ಯಸ್ಥ ಗುಂಡೂರಾವ್, ಮಠದ ದಿವಾನ ನಾಗರಾಜ ಆಚಾರ್ಯ, ರಮೇಶ ಭಟ್ ಉಪಸ್ಥಿತರಿದ್ದರು.
ವಿದುಷಿ ಉಷಾ ಹೆಬ್ಬಾರ್ ಪ್ರಾರ್ಥಿಸಿದರು. ಪ್ರತಿಮಾ ಜಯಪ್ರಕಾಶ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಠದ ವಿದ್ವಾಂಸ ಡಾ. ಬಿ.ಗೋಪಾಲ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಧ್ವಜಾರೋಹಣ, ಶ್ರೀಕೃಷ್ಣ ಮಂತ್ರ ಜಪ
ಸ್ವಾತಂತ್ರ್ಯೋತ್ಸವವದ ಹಿನ್ನೆಲೆಯಲ್ಲಿ ಬೆಳಗ್ಗೆ ಮಠದಲ್ಲಿ ಸುಗುಣೇಂದ್ರ ಶ್ರೀ, ಸುಶ್ರೀಂದ್ರ ಶ್ರೀ ಹಾಗೂ ಗೋವಿಂದ ಗಿರಿ ಮಹಾರಾಜ್ ಅವರು ಗೀತಾ ಮಂದಿರದ ಬಳಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ಶ್ರೀಕೃಷ್ಣ ನಾಮೋತ್ಸವ, ವಿದ್ವತ್ ಗೋಷ್ಠಿ, ಬೆಳಗ್ಗೆ 11:15ರಿಂದ 12:15ರ ವರೆಗೆ ಪರ್ಯಾಯ ಶ್ರೀಗಳ ಉಪಸ್ಥಿತಿಯಲ್ಲಿ ಮಠದ ರಾಜಾಂಗಣದಲ್ಲಿ ಸಾಮೂಹಿಕ 1008 ಬಾರಿ ಓಂ ಸ್ವಾಮಿ ಶ್ರೀಕೃಷ್ಣಾಯ ನಮಃ ಮಂತ್ರ ಜಪ, ಪಠಣ ಕಾರ್ಯಕ್ರಮಕ್ಕೆ ಗೋವಿಂದ ಗಿರಿ ಮಹಾರಾಜ್ ಚಾಲನೆ ನೀಡಿದರು. ಸಾಯಂಕಾಲ ಮಹಿಳೆಯರಿಂದ ಶೋಬಾನೆ ಪಾರಾಯಣ ಜರುಗಿತು. ಚಾಂದ್ರ ಜನ್ಮಾಷ್ಟಮಿಯ ನಿಮಿತ್ತ ರಾತ್ರಿ 10ರಿಂದ 11:30ರ ವರೆಗೆ ಶ್ರೀಕೃಷ್ಣ ದೇವರಿಗೆ ವಿಶೇಷ ಪೂಜೆ, ಅರ್ಘ್ಯ ಪ್ರದಾನ ನಡೆಯಿತು.