ಜಿಲ್ಲೆ

ಅಕಾಡೆಮಿ ರೀತಿಯಲ್ಲಿ ಬೆಳೆಯಲಿ ಯಕ್ಷಗಾನ ಕಲೆ...

ಪ್ರೊ. ಎಂ.ಎಲ್​. ಸಾಮಗ ಆಶಯ

ಕಲಾಕ್ಷೇತ್ರದ ಸ್ಥಾಪನಾ ದಿನಾಚರಣೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಸುದೀರ್ಘ 74 ವರ್ಷದಿಂದ ಕಲಾಸೇವೆ ನಿರ್ವಹಿಸುತ್ತಿರುವ ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರ ಸಂಸ್ಥೆಯು ಇನ್ನಿತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದೆ. ಯಕ್ಷ ಶಿಕ್ಷಣವನ್ನು ಅಕಾಡೆಮಿ ರೀತಿಯಲ್ಲಿ ಬೆಳೆಸಬೇಕಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಪದ್ಧತಿ ಜಾರಿಗೆ ತಂದು ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್​ ನೀಡುವಂತೆ ಆಗಬೇಕು. ಇಲ್ಲಿ ಕಲಿತ ಕಲಾವಿದರಿಗೆ ದೇಶ-ವಿದೇಶಗಳಲ್ಲಿ ಮನ್ನಣೆ ಲಭಿಸುವಂತೆ ಮಾಡಬೇಕು ಎಂದು ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್​. ಸಾಮಗ ಆಶಯ ವ್ಯಕ್ತಪಡಿಸಿದರು.

ಉಡುಪಿಯ ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ ಅಮೃತ ಮಹೋತ್ಸವ ವರ್ಷದ ನಿಮಿತ್ತ ಸಂಸ್ಥೆಯ ಸಭಾಭವನದಲ್ಲಿ ಜುಲೈ 20ರಂದು ಆಯೋಜಿಸಿದ್ದ 75ನೇ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೈವಗಳ ಅನುಗ್ರಹ

ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷ ನಿಟ್ಟೂರು ಮಹಾಬಲ ಶೆಟ್ಟಿ ಮಾತನಾಡಿ, ನಿಟ್ಟೂರು ಶ್ರೀ ಪಂಚಧೂಮಾವತಿ ದೈವಸ್ಥಾನದಲ್ಲಿ ಆರಂಭವಾದ ಈ ಸಂಘಕ್ಕೆ ದೈವ ಶಕ್ತಿಗಳ ಪೂರ್ಣ ಅನುಗ್ರಹವಿದೆ. ದಶಮಾನೋತ್ಸವ, ರಜತ ಸಂಭ್ರಮ, ಸುವರ್ಣ ಮಹೋತ್ಸವ ಆಚರಿಸಿ ಈಗ ವಜ್ರ ಮಹೋತ್ಸವದ ಹಂತಕ್ಕೆ ಬರಲು, ಸಂಸ್ಥೆಯ ಉನ್ನತಿಗೆ ಕಾರಣರಾದವರನ್ನು ಸ್ಮರಿಸುತ್ತೇನೆ ಎಂದರು.

ಸನ್ಮಾನ, ಲೋಗೋ ಬಿಡುಗಡೆ

ಸಂಘದ ಸದಸ್ಯ, ಖ್ಯಾತ ಮದ್ದಲೆ ವಾದಕ ಹಾಗೂ ಯಕ್ಷಗುರು ರತ್ನಾಕರ ಶೆಣೈ ಶಿವಪುರ ಅವರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಕೆ.ರಘುಪತಿ ಭಟ್​ ಅಮೃತ ಮಹೋತ್ಸವದ ಲೋಗೋ ಅನಾವರಣಗೊಳಿಸಿದರು. ಕಲಾಕ್ಷೇತ್ರದ ಗೌರವಾಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಅಮೃತ ಮಹೋತ್ಸವದ ಸಂಚಾಲಕ ಬನ್ನಂಜೆ ಬಾಬು ಅಮೀನ್​, ಮಾಜಿ ಅಧ್ಯಕ್ಷ ಜಿ.ಬಾಬು ಗೌಡ, ಹಿರಿಯ ಸದಸ್ಯರಾದ ನಿಟ್ಟೂರು ಶೀನಪ್ಪ ಸುವರ್ಣ, ಗೋಪಾಲಕೃಷ್ಣ ಮಲ್ಯ, ಅಣ್ಣಯ್ಯ ಪಾಲನ್​, ಜಿ. ಶಿವ ಪಾಲನ್​, ದಯಾನಂದ ಉಪಸ್ಥಿತರಿದ್ದರು.

ಕಲಾಕ್ಷೇತ್ರದ ಅಧ್ಯಕ್ಷ ಕೇಶವಮೂರ್ತಿ ಬಿಲ್ಪತ್ರೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ ಕೋಟ್ಯಾನ್​ ಕಾರ್ಯಕ್ರಮ ನಿರೂಪಿಸಿದರು. ಡಾ. ರಮೇಶ ಚಿಂಬಾಲ್ಕರ್​ ವಂದಿಸಿದರು. ಕೋಶಾಧಿಕಾರಿ ನರಸಿಂಹ ಎನ್​.ಆರ್​, ಕಲಾ ಕಾರ್ಯದರ್ಶಿ ಶ್ರೀಧರ ಭಟ್​ ಸಹಕರಿಸಿದರು.

ಸಭೆಯ ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಜರಗಿತು. ಸಂಘದ ಸರ್ವ ಸದಸ್ಯರು, ವಿದ್ಯಾರ್ಥಿಗಳು, ಕಲಾಭಿಮಾನಿಗಳು ಪಾಲ್ಗೊಂಡಿದ್ದರು.

ಬಾಲ್ಯದಿಂದಲೂ ಯಕ್ಷಗಾನ ಕಲಾಕ್ಷೇತ್ರದ ಚಟುವಟಿಕೆ ಗಮನಿಸುತ್ತಲೇ ಇದ್ದೇನೆ. ಸಂಘದ ಕಚೇರಿಯಲ್ಲಿ 74 ವರ್ಷ ಸುದೀರ್ಘ ಸೇವೆ ಸಲ್ಲಿಸಿದ ಪದಾಧಿಕಾರಿಗಳ ಪಟ್ಟಿ ಅಳವಡಿಸಿರುವುದು ಹಾಗೂ ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಕೈಗೊಂಡಿರುವುದು ಸ್ತುತ್ಯಾರ್ಹ. | ಕೆ.ರಘುಪತಿ ಭಟ್​. ಮಾಜಿ ಶಾಸಕ