ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಅಕಾಡೆಮಿಕ್ ಕ್ಷೇತ್ರ ಹಾಗೂ ಕೈಗಾರಿಕೆಯನ್ನು ಸಮನ್ವಯಗೊಳಿಸುವ ಅಕಾಡೆಮಿಕ್ ನೀತಿಯಿಂದಾಗಿ ರಾಜ್ಯದಲ್ಲಿ 20,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ನೋಂದಣಿಗೊಂಡಿವೆ. ಇದರಿಂದಾಗಿ ಭಾರತದಲ್ಲಿನ ಸ್ಟಾರ್ಟ್‌ಅಪ್ ರಾಜಧಾನಿಯಾಗಿ ಕರ್ನಾಟಕ ಬೆಳೆದು, ಮುಂದಿನ ದಶಕಗಳಲ್ಲಿ 200 ಟ್ರಿಲಿಯನ್ ಡಾಲರ್ ಮೌಲ್ಯ ತಲುಪುವ ಸಾಮರ್ಥ್ಯ ಹೊಂದಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆ ಪಾನೀರ್‌ನಲ್ಲಿರುವ ನಿಟ್ಟೆ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಅಕ್ವಮರೀನ್ ಇನೋವೇಶನ್ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಪ್ರೊ.ಎಂ.ಶಾಂತಾರಾಮ್ ಶೆಟ್ಟಿ ಮಾತನಾಡಿ, ಮಂಗಳೂರಿನಲ್ಲಿ ಎಂಟು ವೈದ್ಯಕೀಯ, 39 ಇಂಜಿನಿಯರಿಂಗ್ ಕಾಲೇಜುಗಳು, 250 ಶಿಕ್ಷಣ ಸಂಸ್ಥೆಗಳು, ಸಾಕಷ್ಟು ಸರ್ವಧರ್ಮೀಯರ ಧಾರ್ಮಿಕ ಕೇಂದ್ರಗಳು ಇರುವುದು ಇಲ್ಲಿನ ವಿಶೇಷ. ದ.ಕ. ಜಿಲ್ಲೆಯ 25 ಸಾವಿರ ಜನರು ಮುಂಬೈಯಲ್ಲಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಅದೆಷ್ಟೋ ಮಂದಿ ಮೀನುಗಾರಿಕಾ ವೃತ್ತಿ ಮಾಡುತ್ತಿದ್ದು, ನೂತನ ಕೇಂದ್ರ ಮೀನುಗಾರಿಕೆ ವಿಚಾರದಲ್ಲಿ ಸುಶಿಕ್ಷಿತರನ್ನಾಗಿಸಲಿದೆ. ಮೀನು ಸುರಕ್ಷಿತ ಆಹಾರ ಎನ್ನುವುದು ಸಂಶೋಧನೆಯಲ್ಲಿ ಸಾಬೀತಾಗಿದೆ ಎಂದರು.
ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ್, ನಿಟ್ಟೆ ವಿವಿ ಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ್ ಕಾರ್ಬಾರಿ ಮೊದಲಾದವರು ಉಪಸ್ಥಿತರಿದ್ದರು.
ನಿಟ್ಟೆ ವಿವಿ ಕುಲಪತಿ ಪ್ರೊ.ಹರ್ಷ ಹಾಲಹಳ್ಳಿ ಸ್ವಾಗತಿಸಿದರು. ಎನ್‌ಯುಸಿಎಸ್‌ಇಆರ್ ನಿರ್ದೇಶಕ ಪ್ರೊ.ಅನಿರ್ಬನ್ ಚಕ್ರಬೊರ್ತಿ ವಂದಿಸಿದರು. ಡಾ.ಅಕ್ಷತಾ ನಿರೂಪಿಸಿದರು.
ನಿಟ್ಟೆ ವಿಶ್ವವಿದ್ಯಾಲಯದ ಕಳೆದ ಎರಡು ದಶಕಗಳ ಸಾಧನೆ ನಿಜಕ್ಕೂ ಅಪೂರ್ವ. ಭಾರತದಲ್ಲಿ ಮೊದಲ ಬಾರಿಗೆ ಆಕ್ವಾಮೆರೈನ್ ಅತ್ಯುನ್ನತ ಕೇಂದ್ರವನ್ನು ಸ್ಥಾಪಿಸಿರುವುದು ನಿಟ್ಟೆಗೆ ಮಾತ್ರವಲ್ಲ, ಕರ್ನಾಟಕದ ಬೆಳವಣಿಗೆಯ ಹಾದಿಯಲ್ಲಿಯೂ ಪ್ರಮುಖ ಹೆಜ್ಜೆ. ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಣ ಸಂಸ್ಥೆಗಳು, ಅತ್ಯುನ್ನತ ಕೇಂದ್ರಗಳು, ವೆಂಚರ್ ಕ್ಯಾಪಿಟಲ್ ಜಾಲಗಳು, ಹ್ಯಾಕಥಾನ್‌ಗಳು ಮತ್ತು ನವೀನತಾ ಕಾರ್ಯಕ್ರಮಗಳು ಮುಖ್ಯವಾಗಿ ಬೆಂಗಳೂರು ನಗರದಲ್ಲಿ ಮಾತ್ರ ಕೇಂದ್ರೀಕರಿಸಲ್ಪಟ್ಟಿವೆ. ನಿಟ್ಟೆಯ ಈ ಉಪಕ್ರಮದಿಂದ ಸರ್ಕಾರದ ತಲುಪುವಿಕೆ ದೂರದ ಪ್ರದೇಶಗಳಿಗೂ ವಿಸ್ತರಿಸಿ, ಯುವಮನಸ್ಸುಗಳಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ ಪ್ರಿಯಾಂಕ್ ಖರ್ಗೆ, ಸಚಿವ