ತಾಲೂಕಿನ ಮಗ್ಗೆ ಗ್ರಾಮದಲ್ಲಿ 14 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ಬಸ್ ತಂಗುದಾಣವನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿ ಮಾತನಾಡಿದರು. 
ಜಿಲ್ಲೆ

ಮಗ್ಗೆ ಗ್ರಾಮದ ಬಸ್ ತಂಗುದಾಣ ಉದ್ಘಾಟನೆ

ಆಲೂರು: ನೂತನ ಬಸ್ ತಂಗುದಾಣವನ್ನು ಬಳಕೆಗೆ ಮುಕ್ತಗೊಳಿಸಿದ್ದು, ಇದರ ಶುಚಿತ್ವ ಕಾಪಾಡಿಕೊಳ್ಳುವುದು ಸಾರ್ವಜನಿಕರ ಕರ್ತವ್ಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ತಾಲೂಕಿನ ಮಗ್ಗೆ ಗ್ರಾಮದಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಮತ್ತು ಗ್ರಾಮ ಸ್ವಂತ ಸಂಪನ್ಮೂಲದ ನಿಧಿ ಬಳಸಿಕೊಂಡು 14 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬಸ್ ತಂಗುದಾಣ ಉದ್ಘಾಟಿಸಿ ಮಾತನಾಡಿದರು. ಜನಸಾಮಾನ್ಯರಿಗೆ ಮೂಲ ಸೌಕರ್ಯ ಕಲ್ಪಿಸುವುದು ಈ ಕ್ಷೇತ್ರದ ಶಾಸಕನಾಗಿರುವ ನನ್ನ ಕರ್ತವ್ಯ. ಈ ಭಾಗದಲ್ಲಿ ಉತ್ತಮ ರೀತಿಯ ನೂತನ ತಂಗುದಾಣ ಸಾರ್ವಜನಿಕರ ಬಳಕೆಗೆ ನೀಡಿದ್ದು, ಇದರ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದರು. ಗ್ರಾಮಾಂತರ ಭಾಗಗಳಿಂದ ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ಕೆಲಸದ ನಿಮಿತ್ತ ನಗರ ಪ್ರದೇಶಗಳಿಗೆ ಹೋಗಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಭಾಗಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಕಲ್ಪಿಸಲಾಗುತ್ತದೆ. ಪ್ರತಿದಿನ ಈ ಬಸ್ ಹಾಸನ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸಿ ಪುನಃ ಮಗ್ಗೆರಾಯಕೊಪ್ಪಲು ಗ್ರಾಮವನ್ನು ತಲುಪುತ್ತಿದೆ ಎಂದು ತಿಳಿಸಿದರು.

ಮಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಸ್ರೀನ್ ಅಕ್ತರ್, ಉಪಾಧ್ಯಕ್ಷ ರೂಪಾ ವಿಜಯಕುಮಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಸಿ ಚಂದ್ರಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷ ಮಂಜೇಗೌಡ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಂತರಾಜು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಜಾತಾ ಕುಮಾರಸ್ವಾಮಿ, ಗ್ರಾಮದ ಹಿರಿಯ ಮುಖಂಡರಾದ ನಂಜುಂಡಪ್ಪ, ಚನ್ನವೀರಗೌಡ, ಲಾಯರ್ ಮಹೇಂದ್ರ, ಚೇತನ್, ಎಂ.ವಿ.ರಾಜಣ್ಣ ಸೇರಿದಂತೆ ಗ್ರಾಮ ಪಂಚಾಯಿತಿ ಪಿಡಿಒಗಳಾದ ಪರಮೇಶ್, ಧನಂಜಯ್, ಸವಿತಾ, ರಮ್ಯಾ, ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಹಾಜರಿದ್ದರು.