ವಿಜಯಪುರ: ಬಸವಾದಿ ಶರಣರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಕಾಯಕ ತತ್ವದಡಿ ನಂಬಿಕೆ ಇರಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಚಿವ ಎಂ.ಬಿ. ಪಾಟೀಲರು ಇನ್ನಷ್ಟು ಉನ್ನತ ಸ್ಥಾನಕ್ಕೇರಲಿ ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ವಿದ್ಯಾನಗರ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನ ಭಗೀರಥ ಪೀಠದ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ ಆಶಿಸಿದರು.
ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಉಪ್ಪಾರ ಸಮಾಜ ಸೇವಾ ಸಂಘ ಶನಿವಾರ ಆಯೋಜಿಸಿದ್ದ ರಾಜ ಋಷಿ ಭಗೀರಥರ ಕಂಚಿನ ಮೂರ್ತಿ ಉದ್ಘಾಟನೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಸಚಿವ ಎಂ.ಬಿ. ಪಾಟೀಲರ ಕೆಲಸ ಕಾರ್ಯಗಳು ಸದಾ ಶ್ಲಾಘನೀಯವಾಗಿದ್ದು, ಜಲಸಂಪನ್ಮೂಲ ಸಚಿವರಾಗಿ ಅವರು ಮಾಡಿದ ಕೆಲಸಗಳಿಂದಾಗಿ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ. ಎಲ್ಲರೂ ಮುಖ್ಯವಾಹಿನಿಗೆ ಬರಬೇಕು ಎಂಬುದು ಬಸವಾದಿ ಶರಣರ ಆಶಯವಾಗಿತ್ತು. ಅನುಭವ ಮಂಟಪದ ಮೂಲಕ ಸಮಾನತೆಗೆ ಅವಕಾಶ ಕಲ್ಪಿಸಲಾಗಿತ್ತು. ಸಚಿವರು ಈ ತತ್ಚಗಳಡಿ ಕಾಯಕ ಮಾಡುತ್ತಿದ್ದಾರೆ ಎಂದರು.
ಬಸವನಾಡಿನಲ್ಲಿ ಜನರು ಜಾತಿಯ ಬದಲು ನೀತಿಯನ್ನು ನೋಡುತ್ತಾರೆ. ಸ್ವಾಮೀಜಿಗಳಿಂದ ಜ್ಞಾನ ಸವಿಯುತ್ತಾರೆ. ಫಲಾಪೇಕ್ಷೆಯಿಲ್ಲದೇ ಗುರುಗಳನ್ನು ಗೌರವಿಸುತ್ತಾರೆ. ಶಿಕ್ಷಣ, ಸಂಘಟನೆ, ಸಂಸ್ಕಾರದ ಮೂಲಕ ಅಭಿವೃದ್ಧಿ ಹೊಂದಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮಾತನಾಡಿ, ಜಲಮೂಲಗಳ ಬಳಿ ನಾಗರಿಕತೆಗಳು ಪ್ರಾರಂಭವಾಗಿವೆ. ಆದರೆ, ಭಗೀರಥ ಮಹರ್ಷಿಗಳು ಗಂಗೆಯನ್ನು ಜಲದ ರೂಪದಲ್ಲಿ ಭೂಲೋಕಕ್ಕೆ ತಂದ ರಾಜ ಋಷಿಯಾಗಿದ್ದಾರೆ ಎಂದು ಹೇಳಿದರು.
ನೀರಾವರಿಯಿಂದಾಗಿ ಜಿಲ್ಲೆಯಲ್ಲಿ ಈ ಹಿಂದೆ ಮಳೆಯಾಶ್ರಿತ ಬೇಸಾಯ ಮಾಡುತ್ತಿದ್ದ ರೈತರು ಸುಸ್ಥಿರ ಕೃಷಿ ಮಾಡಲು ಅನುಕೂಲವಾಗಿದೆ. ಕಾಖಂಡಕಿಗೆ ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರಾಗಿದೆ. ಈಗ ಇಲ್ಲಿಗೆ ಜಲದ ರೂಪದಲ್ಲಿ ಲಕ್ಷ್ಮಿ ಬಂದಿದ್ದಾಳೆ. ಇನ್ನು ಮುಂದೆ ಸರಸ್ವತಿಯೂ ನೆಲೆಸಲಿದ್ದಾಳೆ. ಈ ಸಮುದಾಯ ಈಗ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.
ಕಾಖಂಡಕಿ ಗುರುದೇವಾಶ್ರಮದ ಶಿವಯೋಗೇಶ್ವರ ಮಹಾಸ್ವಾಮೀಜಿ ಮಾತನಾಡಿ, ಭಾರತೀಯರಾದ ನಾವೆಲ್ಲರೂ ದುಶ್ಚಟಗಳಿಂದ ದೂರವಿದ್ದು, ಜಾತಿಭೇದ ಮರೆತು ಸದ್ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಆರೋಗ್ಯಪೂರ್ಣ ಸಮಾಜ ಕಟ್ಟಲು ಸಾಧ್ಯ. ಹಿಡಿದ ಕೆಲಸವನ್ನು ಮಾಡಿ ತೋರಿಸುವ ಸಚಿವರ ಕೆಲಸ ಕಾರ್ಯಗಳು ಸದಾಕಾಲ ಉಳಿಯಲಿವೆ ಎಂದರು.
ಶಿಕ್ಷಕ ಲಕ್ಷ್ಮಣಗೌಡ ವಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಕಂಚಿನ ಪುತ್ಥಳಿ ಸ್ಥಾಪಿಸಲು ಸಚಿವರು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಸದಾ ನಮ್ಮ ಸಮಾಜದ ಹಿತ ಕಾಪಾಡುತ್ತಿದ್ದಾರೆ. ಪ್ರತಿ ಊರಲ್ಲಿ ಭಗೀರಥ ಸಮುದಾಯ ಭವನ, ಪುತ್ಥಳಿ ಸ್ಥಾಪಿಸಲು ನೆರವಾಗಿದ್ದಾರೆ ಎಂದು ಹೇಳಿದರು.
ಕಾಖಂಡಕಿ ನಿಜಲಿಂಗಯ್ಯ ಮಹಾಸ್ವಾಮೀಜಿ, ಚಿಕ್ಕಾಲಗುಂಡಿಯ ಶಿವಶರಣಾನಂದ ಮಹಾಸ್ವಾಮೀಜಿ, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ ಮಾತನಾಡಿದರು.
ಕಾಖಂಡಕಿಯ ಅಶೋಕ ಹುಚ್ಚಪ್ಪಯ್ಯ ದಿಗಂಬರಿಮಠ, ಮುಖಂಡರಾದ ರಾಮನಗೌಡ ಬಿ. ಪಾಟೀಲ, ಬಾಪುಗೌಡ ಬಿ. ಪಾಟೀಲ ಶೇಗುಣಸಿ, ಮುತ್ತಪ್ಪ ಕೆ. ಶಿವಣ್ಣವರ, ಜಕ್ಕಪ್ಪ ಯಡವೆ, ಅನೀಲ ಅವಳೆ, ಸೋಮಶೇಖರ ಬಂಡಿ, ಶಂಕರ ಬೆಳ್ಳುಬ್ಬಿ, ಅಪ್ಪುಗೌಡ ಪಾಟೀಲ, ಪದ್ಮಾವತಿ ಗೌಡಪ್ಪಗೋಳ, ಅರವಿಂದ ಕೆ. ಕೊಪ್ಪದ, ರುಕ್ಮಾಬಾಯಿ ಚ. ಲೆಂಕಪ್ಪಗೋಳ, ರಾಜು ಮು. ತೇಲಣ್ಣವರ, ಮಲ್ಲಿಕಾರ್ಜುನ ಹು. ಪರಸನ್ನವರ, ಅಲಿಸಾಬ ಎಂ. ಖಡಕೆ, ಈರಗೊಂಡ ಬಿರಾದಾರ, ರಮೇಶ ಹೆಬ್ಬಿ, ವಿ.ಎಸ್. ಪಾಟೀಲ, ನಂದಕುಮಾರ ಚಂದರಗಿ, ಉಮೇಶ ಮಲ್ಲಣ್ಣವರ, ಮಲ್ಲು ಲೆಂಕಪ್ಪಗೋಳ, ಭೀಮಪ್ಪ ಸ. ಮೋಳಗಿ, ಸಂಗಪ್ಪ ಗಾಂಜಿ, ಕಿರಣ ದಳವಾಯಿ, ಸಂಗಪ್ಪ ಪಡಸಲಗಿ, ಬಸವರಾಜ ಹಕಾರಿ, ನಾಗರಾಜ ಹೊನವಾಡ, ಲಕ್ಷ್ಮಣಗೌಡ ವಿ. ಪಾಟೀಲ, ಈರಣ್ಣ ಮಾಡಲಗಿ ಮತ್ತಿತರರಿದ್ದರು.