ಹಾಸನ: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್‌ಇ ಶಾಲಾ ಸಮೂಹದ 15ನೇ ವಿದ್ಯಾಕೇಂದ್ರ ಉದ್ಘಾಟನೆಯನ್ನು ನಗರದ ಬಿ.ಟಿ. ಕೊಪ್ಪಲಿನ ಎಸ್‌ಎಂಕೆ ನಗರದಲ್ಲಿ ಭಾನುವಾರ ನೆರವೇರಿಸಲಾಯಿತು.
ಆರ್‌ಎಸ್‌ಎಸ್ ಸಹ ಸರಕಾರ್ಯವಾಹ ಸಿ.ಆರ್. ಮುಕುಂದ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಯಶಸ್ವಿ ಪ್ರಯೋಗಗಳಲ್ಲಿ ಒಂದಾದ ರಾಷ್ಟ್ರೋತ್ಥಾನದ ವಿದ್ಯಾಕೇಂದ್ರವು ಹಾಸನದಲ್ಲಿ ಕಾರ್ಯಾರಂಭ ಮಾಡಿದೆ. ಅದು ಮಾದರಿ ಶಾಲೆಯಾಗುತ್ತ ಸಮಾಜ ಪರಿವರ್ತನಾ ಕೇಂದ್ರವಾಗಿ ಬೆಳೆಯಲಿ ಎಂದು ಆಶಿಸಿದರು.
ಸಾಮಾಜಿಕ ಹಾಗೂ ವ್ಯವಸ್ಥಾ ಪರಿವರ್ತನೆಯಲ್ಲಿ ಶಾಲೆಗಳ ಪಾತ್ರ ಬಹಳ ದೊಡ್ಡದಿದೆ. ಹಾಗಾಗಿ ಶಾಲೆ ಎಂದರೆ ಕಟ್ಟಡ ಹಾಗೂ ಅಗತ್ಯ ಮೂಲಸೌಕರ್ಯಗಳಿಗಿಂತ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಪೋಷಕರು ಹಾಗೂ ಸಮಾಜದ ಹತ್ತು ಸಮಸ್ತರ ಪಾಲ್ಗೊಳ್ಳುವಿಕೆಗೆ ಒಂದು ತೂಕ ಹೆಚ್ಚಿದ್ದು, ಅವರೇ ನಿಜವಾದ ಪರಿವರ್ತನಾ ವಾಹಕರು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ತುಮಕೂರಿನ ಸಿದ್ಧಗಂಗ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮಾತನಾಡಿ, ಭಾರತೀಯ ಜೀವವಿಮಾ ನಿಗಮದ ಲಾಂಛನದ ಉದಾಹರಣೆ ಕೊಡುತ್ತ ಮಧ್ಯದಲ್ಲಿ ಬೆಳಗುವ ದೀಪ ಜ್ಞಾನ ಸಂಪನ್ನ ಮಕ್ಕಳಾಗಬೇಕಾದರೆ ಶಾಲೆ ಹಾಗೂ ಮನೆಗಳು ಎರಡೂ ಕಾಳಜಿಯ ಕೈಗಳಾಗಬೇಕು. ಮಕ್ಕಳು ಭವಿಷ್ಯದ ಸಂಪತ್ತು ಹಾಗೂ ಶಕ್ತಿಯಾಗಿ ರೂಪುಗೊಳ್ಳಬೇಕಾದರೆ ಭಾರತೀಯ ಪರಂಪರೆಯ ವ್ಯಕ್ತಿ ನಿರ್ಮಾಣದ ಶಿಕ್ಷಣ ಮಕ್ಕಳಿಗೆ ಸಿಗಲೇಬೇಕು ಎಂದು ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಹಾಸನದ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ, ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕುಮಾರ್, ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಜಿ. ಎಲ್. ಮುದ್ದೇಗೌಡ, ಮಾಜಿ ಶಾಸಕ ಪ್ರೀತಂ ಗೌಡ ಉಪಸ್ಥಿತರಿದ್ದರು.