ಜಿಲ್ಲೆ

ಬಸವಣ್ಣನ ಆಶಯ ಅನುಷ್ಠಾನವಾಗಲಿ: ಸಿದ್ದಗಂಗಾಮಠದ ಪೀಠಾಧ್ಯಕ್ಷ ಸಿದ್ದಲಿಂಗ ಮಹಾಸ್ವಾಮೀಜಿ ಸಲಹೆ

ಮಂಡ್ಯ: ವಿಶ್ವಗುರು ಬಸವಣ್ಣನವರ ಕಾಯಕ, ದಾಸೋಹ ತತ್ವ ಸೇರಿದಂತೆ ಸಮಸಮಾಜ ನಿರ್ಮಾಣದ ಆಶಯಗಳನ್ನು ಅನುಷ್ಠಾನಗೊಳಿಸಿದಲ್ಲಿ ವಿಶ್ವಶಾಂತಿ ನೆಲೆಯಾಗುತ್ತದೆ ಎಂದು ಸಿದ್ದಗಂಗಾಮಠದ ಪೀಠಾಧ್ಯಕ್ಷ ಸಿದ್ದಲಿಂಗ ಮಹಾಸ್ವಾಮೀಜಿ ಸಲಹೆ ನೀಡಿದರು.

ತಾಲೂಕಿನ ಮಾಚಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ನೂತನವಾಗಿ ನಿರ್ಮಿಸಿರುವ ದೇವಿರಮ್ಮ ದೇವಾಲಯ ಲೋಕಾರ್ಪಣೆ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಶಾಂತಿ, ಅಸಮಾನತೆ, ಮೌಢ್ಯತೆ, ದ್ವೇಷ ಸಾಧನೆ, ಯುದ್ಧ ಭೀತಿಯಿಂದ ನಲುಗುತ್ತಿರುವ ವಿಶ್ವದಲ್ಲಿ ಶಾಂತಿ ನೆಲೆಯಾಗಬೇಕಾದರೆ ಪ್ರತಿಯೊಬ್ಬರೂ ದುಡಿದು ಬದುಕುವ ಕಾಯಕ ಹಾಗೂ ಸಮ ಸಮಾಜವನ್ನು ನಿರ್ಮಾಣ ಮಾಡುವ ಶಿವಶರಣರ ದಾಸೋಹ ತತ್ವವನ್ನು ಅನುಸರಿಸಿದಲ್ಲಿ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಕಾಯಕದಲ್ಲಿ ಕೀಳರಿಮೆಯನ್ನು ಕಾಣದೆ ಎಲ್ಲ ಕೆಲಸಗಳೂ ಸರ್ವಶ್ರೇಷ್ಠವೆಂದು ಭಾವಿಸಬೇಕು. ವಿಶೇಷವಾಗಿ ಕೃಷಿ ಕಾಯಕ ಎಲ್ಲರಿಗೂ ಅನ್ನವನ್ನು ನೀಡುವ ಮಹತ್ವದ ಕೆಲಸವಾಗಿದ್ದು ಯುವಜನತೆ ಕೃಷಿಯ ಕಡೆ ಹೆಚ್ಚಿನ ಆಸಕ್ತಿ ವಹಿಸಬೇಕು. ದೇವಾಲಯಗಳು, ಪ್ರಾರ್ಥನಾ ಮಂದಿರಗಳು ಮನುಷ್ಯನಿಗೆ ಸನ್ಮಾರ್ಗವನ್ನು ತೋರುವ ದಾರಿದೀಪವಾಗಿವೆ. ಪ್ರತಿಯೊಬ್ಬರೂ ನಿತ್ಯ ಪ್ರಾರ್ಥನೆ, ಪೂಜೆಯ ಜತೆಗೆ ಶಿವಶರಣರ ಆದರ್ಶವನ್ನು ಮೈಗೂಡಿಸಿಕೊಂಡು ನಡೆದಾಗ ಎಲ್ಲೆಡೆ ಶಾಂತಿಯ ವಾತಾವರಣ ನೆಲೆಯಾಗುತ್ತದೆ. ಮಹಿಳೆಯರು ಮಕ್ಕಳಿಗೆ ಸಾಧಕರ, ಹಿರಿಯರ ಆದರ್ಶಗಳನ್ನು ಪರಿಚಯಿಸುವ ಮೂಲಕ ಬಾಲ್ಯದಿಂದಲೇ ಮಕ್ಕಳಲ್ಲಿ ಬಸವ ಪ್ರಜ್ಞೆ ಮೂಡಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.

111ವರ್ಷಗಳ ಸುದೀರ್ಘ ಕಾಲ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕಾರ್ಯಗಳ ಮೂಲಕ ಕೋಟ್ಯಂತರ ಭಕ್ತರ ಭಾವಕೋಶದಲ್ಲಿ ನೆಲೆಯಾಗಿ ನಿಂತ ಲಿಂಗೈಕ್ಯ ಪರಮಪೂಜ್ಯ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರ ಪುತ್ಥಳಿ ಹಾಗೂ ವಿಶ್ವಗುರು ಬಸವಣ್ಣನವರ ಪ್ರತಿಮೆಯನ್ನು ಮಾಚಹಳ್ಳಿ ಗ್ರಾಮದಲ್ಲಿ ಸ್ಥಾಪಿಸಿರುವುದು ಅತ್ಯಂತ ಶ್ಲಾಘನೀಯ. ಅವರ ಆದರ್ಶಗಳು ಪ್ರತಿಯೊಬ್ಬರ ಮನೆಮನಗಳನ್ನು ಮುಟ್ಟಬೇಕೆಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಮುಖಂಡರಾದ ಎಂ.ಪಿ.ರಾಜಪ್ಪ, ಸಂತೋಷ್‌ಕುಮಾರ್, ಶಿವಕುಮಾರ್, ಅರುಣ್‌ಕುಮಾರ್, ರಾಜಶೇಖರ್, ಸೋಮಶೇಖರ್, ಸ್ವಾಮಿ, ಚೇತನ್, ಶಿವರಾಜ್ ಇತರರಿದ್ದರು.

ವೇದಿಕೆ ಕಾರ್ಯಕ್ರಮಕ್ಕೆಂದು ಗ್ರಾಮಕ್ಕೆ ಆಗಮಿಸಿದ ಸಿದ್ದಲಿಂಗಮಹಾಸ್ವಾಮೀಜಿ, ಬೇಬಿಬೆಟ್ಟದ ಶಿವಸಿದ್ದೇಶ್ವರಸ್ವಾಮೀಜಿ ಹಾಗೂ ಗಣ್ಯರನ್ನು ಪೂರ್ಣಕುಂಭದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಗ್ರಾಮದ ಹಲವು ಭಕ್ತರ ಮನೆಗೆ ತೆರಳಿಸಿದ ಸ್ವಾಮೀಜಿಯವರಿಗೆ ಭಕ್ತರು ಪಾದಪೂಜೆ ನೆರವೇರಿಸಿ ಗುರುವಂದನೆ ಸಲ್ಲಿಸಿದರು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಎಂಟು ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನದಾಸೋಹ ನೆರವೇರಿಸಲಾಯಿತು.