ಜಿಲ್ಲೆ

ಸ್ನೇಹಮೈತ್ರಿ ರಕ್ತಸ್ರಾವ ರೋಗಿಗಳ ಉಚಿತ ಆರೈಕೆ ಸದನ ಉದ್ಘಾಟನೆ

ಅಕ್ಕಿಆಲೂರ: ಆರೋಗ್ಯದ ಕುರಿತು ಸಮಾಜದಲ್ಲಿ ಜಾಗೃತಿಯ ಸಂಚಲನ ನಿರ್ವಣವಾಗಿದ್ದು, ಮಾನವೀಯತೆ ಅನಾವರಣಕ್ಕೆ ಸಂಕಷ್ಟದಲ್ಲಿರುವ ರೋಗಿಗಳ ಜತೆಗೆ ಸಮಾಜ ನಿಲ್ಲಬೇಕು ಎಂದು ಸ್ಥಳೀಯ ವಿರಕ್ತಮಠದ ಶಿವಬಸವ ಸ್ವಾಮೀಜಿ ಹೇಳಿದರು.

ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿಮೋಫಿಲಿಯಾ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸ್ನೇಹಮೈತ್ರಿ ಬ್ಲಡ್ ಆರ್ವಿು ಸಹಯೋಗದೊಂದಿಗೆ ಶುಕ್ರವಾರ ನೂತನವಾಗಿ ಆರಂಭಗೊಂಡ ಸ್ನೇಹಮೈತ್ರಿ ರಕ್ತಸ್ರಾವ ರೋಗಿಗಳ ಉಚಿತ ಆರೈಕೆ ಸದನ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಥಲಸೇಮಿಯಾ, ಹಿಮೋಫಿಲಿಯಾ, ಕ್ಯಾನ್ಸರ್ ಸೇರಿ ಅನೇಕ ಕಾಯಿಲೆಗಳು ಮನುಷ್ಯನ ಜೀವನಕ್ಕೆ ಶೀಘ್ರದಲ್ಲೇ ಕಂಟಕವಾಗುವುದಿಲ್ಲ, ರೋಗಿಗಳಲ್ಲಿ ಆತ್ಮವಿಶ್ವಾಸ, ಆತ್ಮಸ್ಥೈರ್ಯ ಇಲ್ಲದ ಪರಿಣಾಮ ಬೇಗನೆ ಕುಗ್ಗುತ್ತಾರೆ, ಆತ್ಮಛಲ ತುಂಬುವ ಕೆಲಸಕ್ಕೆ ಸಮುದಾಯ ಮುಂದಾಗಬೇಕು. ರೋಗಿಗಳಿಗೆ ರಕ್ತದಾನ, ನೇತ್ರದಾನ, ಆರ್ಥಿಕ ಸಹಾಯಕ್ಕೆ ಮುಂದಾಗುವ ಸೇವಾ ಕಾರ್ಯ ಇತ್ತೀಚಿನ ದಿನಗಳಲ್ಲಿ ಹೆಚ್ಚು ನಡೆಯುತ್ತಿರುವುದು ಸಂತಸದ ವಿಷಯ ಎಂದರು.

ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ ಮಾತನಾಡಿ, ವಿಶ್ವದ ಎಲ್ಲ ರಾಷ್ಟ್ರಗಳಿಗಿಂತ ಭಾರತ ಆರೋಗ್ಯವಂತ ರಾಷ್ಟ್ರ. ಯೋಗ, ಆಯುರ್ವೆದ, ಪಂಚಕರ್ಮ ಚಿಕಿತ್ಸೆ ಕಾಲದಿಂದಲೂ ಜಗತ್ತಿಗೆ ಆರೋಗ್ಯದ ಜಾಗೃತಿ ಮೂಡಿಸಿದ ಭಾರತ, ಇಂದಿನ ಆಧುನಿಕ ಯುಗದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಗಮನಾರ್ಹ ಅಭಿವೃದ್ಧಿ ಕಂಡಿದೆ ಎಂದು ಹೇಳಿದರು.

ಶಾಸಕ ಶ್ರೀನಿವಾಸ ಮಾನೆ ಮಾತನಾಡಿದರು.

ಸ್ನೇಹಮೈತ್ರಿ ಬ್ಲಡ್ ಆರ್ವಿು ಮುಖ್ಯಸ್ಥ, ಪೊಲೀಸ್ ಪೇದೆ ಡಾ.ಕರಬಸಪ್ಪ ಗೊಂದಿ 100ನೇ ಬಾರಿ ರಕ್ತದಾನ ಮಾಡಿದರು. ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ. ಅಖಿಲೇಶ ಮಾಳೋದೆ, ದಾವಣಗೆರೆ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ ಡಾ. ಸುರೇಶ ಅನಗವಾಡಿ, ಎಸ್ಪಿ ಶಿವಕುಮಾರ ಗುಣಾರೆ, ಡಿಎಚ್​ಒ ಡಾ. ರಾಘವೇಂದ್ರಸ್ವಾಮಿ ಎಚ್. ಎಸ್., ಹೆಚ್ಚುವರಿ ಎಸ್ಪಿ ಸಿ. ಗೋಪಾಲ, ಜಿಲ್ಲಾ ರಕ್ತನಿಧಿ ತಜ್ಞ ಡಾ. ಬಸವರಾಜ ತಳವಾರ ಉಪಸ್ಥಿತರಿದ್ದರು.