ಹಿರೀಸಾವೆ: ಹೋಬಳಿಯ ಹೊನ್ನಶೆಟ್ಟಿಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಸಿಂಗಮ್ಮದೇವಿ ದೇಗುಲದ ಉದ್ಘಾಟನೆ ಪ್ರಯುಕ್ತ ಹೋಮ, ಹವನ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಶುಕ್ರವಾರ ವಿಜೃಂಭಣೆಯಿಂದ ನೆರವೇರಿದವು.
ಗುರುವಾರ ಸಂಜೆ ಶುಭ ಗೋಧೂಳಿ ಲಗ್ನದಲ್ಲಿ ನೂತನ ವಿಗ್ರಹವನ್ನು ಗಂಗಾಪೂಜೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ಮೆರವಣಿಗೆ ನಡೆಸಿ ಗೋವು ಹಾಗೂ ಗುರುಗಳೊಂದಿಗೆ ದೇವಾಲಯ ಪ್ರವೇಶ ಮಾಡಲಾಯಿತು.
ವಿಗ್ರಹ ಪ್ರತಿಷ್ಠಾಪನಾ ಅಂಗವಾಗಿ ಗಣಪತಿ ಪೂಜೆ, ಪುಣ್ಯ, ನಾಂದಿ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ದುರ್ಗ ಹೋಮ, ರುದ್ರ ಹೋಮ ಹಾಗೂ ವಿವಿಧ ಪೂಜೆ ನೆರವೇರಿಸಲಾಯಿತು.
ಶುಕ್ರವಾರ ಬ್ರಾಹ್ಮೀ ಮುಹೂರ್ತದಲ್ಲಿ ವಿಗ್ರಹ ಪ್ರತಿಷ್ಠಾಪನಾ ಕಾರ್ಯ ಕೈಗೊಳ್ಳಲಾಯಿತು. ಪೂಜಾ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ನುಗ್ಗೇಹಳ್ಳಿ ಅಯ್ಯನಹಳ್ಳಿ ಪುರವರ್ಗ ಹಿರೇಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಿದರು. ಅಮ್ಮನವರಿಗೆ ಅಷ್ಟೋತ್ತರ ಕುಂಕುಮಾರ್ಚನೆ ಹಾಗೂ ಮಹಾಮಂಗಳಾರತಿ ನೆರವೇರಿಸಿದ ಬಳಿಕ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಬಾಳಗಂಚಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ್, ಹಿರೀಸಾವೆ ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀಧರ್, ಮಾಜಿ ಉಪಾಧ್ಯಕ್ಷ ಬಿ.ಸಿ.ಕಿರಣ್, ಬೆಂಗಳೂರಿನ ಯುಟಿ ಲೈವ್ ಲೈನ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಿ.ಆರ್.ಜಯರಾಂ, ಶ್ರೀ ಸಿಂಗಮ್ಮ ದೇವಿ ಟ್ರಸ್ಟ್ ಅಧ್ಯಕ್ಷ ಮಂಜೇಗೌಡ, ಖಜಾಂಚಿ ಪುಟ್ಟಸ್ವಾಮಿ ಇತರರು ಪಾಲ್ಗೊಂಡಿದ್ದರು.