ಯಲ್ಲಾಪುರ: ಸಿದ್ದಿ ಸಮುದಾಯದವರ ಆರ್ಥಿಕ ಅಭಿವೃದ್ಧಿಗಾಗಿ ತಾಲೂಕಿನ ಇಡಗುಂದಿ ಗ್ರಾ.ಪಂ ವ್ಯಾಪ್ತಿಯ ಲಿಂಗದಬೈಲ್ ಬಳಿ ಎನ್.ಆರ್.ಎಲ್.ಎಂ ಯೋಜನೆಯಡಿ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ನಿರ್ಮಿಸಿದ, ಶನಿವಾರ ಉದ್ಘಾಟನೆಯಾಗಬೇಕಿದ್ದ ಡಮಾಮಿ ಸಮುದಾಯ ಪ್ರವಾಸೋದ್ಯಮ ಹೋಂ ಸ್ಟೇ ಹಲವು ಗೊಂದಲಗಳ ಕಾರಣದಿಂದ ಉದ್ಘಾಟನೆಗೊಳ್ಳಲಿಲ್ಲ.
ಸಿದ್ದಿ ಸಮೂದಾಯದ ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸುವ ದೃಷ್ಟಿಯಿಂದ ತಾಲೂಕಿನ ಇಡಗುಂದಿ ಗ್ರಾ.ಪಂ. ವ್ಯಾಪ್ತಿಯ ಲಿಂಗನಬೈಲ್ ನಲ್ಲಿ ಸುಮಾರು 73 ಲಕ್ಷ ರೂ ವೆಚ್ಚದಲ್ಲಿ ಹೋಂ ಸ್ಟೇ ನಿರ್ಮಿಸಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಸೀತಾರಾಮ ಸಂಜೀವಿನ ಒಕ್ಕೂಟಕ್ಕೆ ಮಂಜೂರಿಯಾದ ಈ ಯೋಜನೆ ನಿಸರ್ಗ ಸ್ಪರ್ಷ ಟ್ರೈಬಲ್ ಹೋಮ್ ಸ್ಟೇ ಹೆಸರಿನಲ್ಲಿ ಕೆಲಸ ಆರಂಭಿಸಿತು. ನಂತರ ಸಮುದಾಯದವರ ನಡುವೆ ಉಂಟಾದ ಸಮಸ್ಯೆಯಿಂದಾಗಿ ಒಕ್ಕೂಟದ ಅಧ್ಯಕ್ಷೆಯನ್ನು ಬದಲಾವಣೆ ಮಾಡಲಾಯಿತು. ಕೇರಳದ ಕಬಿನಿ ಸಂಸ್ಥೆಯ ನೇತೃತ್ವದಲ್ಲಿ ಹೋಂ ಸ್ಟೇ ಕೆಲಸವನ್ನು ಮುಗಿಸಲಾಯಿತು. ಮೊದಲಿದ್ದ ಹೆಸರು ಬದಲಾಯಿಸಿ, ದಮಾಮಿ ಸಮುದಾಯ ಪ್ರವಾಸೋದ್ಯಮ ಎಂದು ನಾಮಕರಣ ಮಾಡಿ, ಸಿದ್ದಿ ಸಮುದಾಯದವರನ್ನೇ ಕಡೆಗಣಿಸಿ ತರಾತುರಿಯಲ್ಲಿ ಫೆ.3 ರಂದು ಉದ್ಘಾಟನೆಗೆ ಅಧಿಕಾರಿಗಳು ಮುಂದಾಗಿದ್ದರು.
ಇದನ್ನು ಖಂಡಿಸಿ ಹೋಂ ಸ್ಟೇಯ ಮಾಜಿ ಅಧ್ಯಕ್ಷೆ ರಾಜೇಶ್ವರಿ ಸಿದ್ದಿ ಹಾಗೂ ಸಮುದಾಯದ ಹಲವರು ಸುದ್ದಿಗೋಷ್ಠಿ ನಡೆಸಿ, ಸಿದ್ದಿ ಸಮುದಾಯದ ಹೆಸರನ್ನು ಬಳಸಿಕೊಂಡು ಅಧಿಕಾರಿಗಳು ಹಾಗೂ ಇತರರು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು.
ಈ ಹಿನ್ನಲೆಯಲ್ಲಿ ಉದ್ಘಾಟನೆಗೆ ಆಗಮಿಸಬೇಕಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಇತರರು ಗೈರಾಗಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಎದುರು ಸಮುದಾಯದವರು ಅಳಲು ತೋಡಿಕೊಂಡರು. ಅಮಾಯಕರಾದ ಸಿದ್ದಿ ಜನರ ಹೆಸರನ್ನು ಬಳಸಿಕೊಂಡು ಈ ಯೋಜನೆ ರೂಪಿಸಿದ್ದರೂ, ಸಿದ್ದಿ ಸಮುದಾಯದ ಹೆಸರನ್ನೇ ಬಳಸಿಲ್ಲ. ಯಾವುದೇ ಸಮರ್ಪಕ ಮಾಹಿತಿ ನೀಡದೇ, ತರಾತುರಿಯಲ್ಲಿ ಹೆಸರು ಬದಲಾವಣೆ ಮಾಡಿ, ಉದ್ಘಾಟನೆ ನೆರವೇರಿಸಲು ಹೊರಟಿದ್ದಾರೆ. ಸಮುದಾಯಕ್ಕೆ ಅನ್ಯಾಯವಾಗುವುದನ್ನು ನಾವು ಸಹಿಸುವುದಿಲ್ಲ. ಸಿದ್ದಿ ಸಮೂಹಕ್ಕೆ ಅನ್ಯಾಯವಾಗದಂತೆ ಯೋಜನೆ ರೂಪಿಸಬೇಕೆಂದು ಆಗ್ರಹಿಸಿದರು.
ಶಾಂತಾರಾಮ ಸಿದ್ದಿ ಅವರು ಜಿ.ಪಂ. ಅಧಿಕಾರಿಗಳೊಂದಿಗೆ ಚರ್ಚಿಸಿ, ಪ್ರತಿಕ್ರಿಯಿಸಿ ' ಸಮುದಾಯಕ್ಕೂ ಸರಿಯದ ಮಾಹಿತಿ ನೀಡದೇ ಇರುವುದು ಖಂಡನೀಯ. ಸಮುದಾಯಕ್ಕೆ ಮಾಹಿತಿ ಕೊರತೆ ಇರುವಾಗ, ಅವರಲ್ಲಿ ಗೊಂದಲ ಇರುವಾಗ ಉದ್ಘಾಟನೆ ಮಾಡುವುದು ಸೂಕ್ತವಲ್ಲ. ಎಲ್ಲರನ್ನೂ ಕೂಡಿಸಿ ಸಮಸ್ಯೆಯನ್ನು ಬಗೆ ಹರಿಸಿ, ಕಾಮಗಾರಿ ಮೂರ್ಣ ಮುಗಿಸಿ ಉದ್ಘಾಟನೆ ನಡೆಸುವುದು ಒಳ್ಳೆಯದು. ಸ್ಥಳೀಯ ಶಾಸಕರಿಗೂ ಮಾಹಿತಿ ಇಲ್ಲದೇ, ಅವರೂ ಬಾರದೇ, ನಾನು ಈ ಹೋಂ ಸ್ಟೇ ಉದ್ಘಾಟಿಸುವುದಿಲ್ಲ ಎಂದು ಹೇಳಿ ಅಲ್ಲಿಂದ ತೆರಳಿದರು.
ಪ್ರತಿಭಟನೆಯ ಎಚ್ಚರಿಕೆಯ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಯೋಜನೆಯ ಆರಂಭದಿಂದ, ಕೊನೆಯವರೆಗೂ ಹಲವಾರು ಬಾರಿ ಭೇಟಿ ನೀಡಿ, ಯೋಜನೆಯ ಉಸ್ತುವಾರಿ ವಹಿಸಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಉದ್ಘಾಟನೆಗೆ ಆಗಮಿಸದೇ ಇರುವುದು ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಎಂಬ ಮಾತು ಸಿದ್ದಿ ಸಮುದಾಯದವರಿಂದ ಕೇಳಿ ಬಂತು.
ಇದನ್ನೂ ಓದಿ: ಸಾಲದ ಬಾಧೇ ಮೀನುಗಾರ ಆತ್ಮಹತ್ಯೆ