ಮದ್ದೂರು: ಶಿಕ್ಷಕರ ದಿನಾಚರಣೆ ಅಂಗವಾಗಿ ಸೆ.5 ರಂದು ಸುಯೋಗ್ ಆಸ್ಪತ್ರೆ ಮೈಸೂರು, ಟೌನ್ ಕ್ಲಬ್ ಮದ್ದೂರು ಹಾಗೂ ಕೆ.ಗುರುಶಾಂತಪ್ಪ ಸಾರ್ವಜನಿಕರ ಅಸ್ಪತ್ರೆ ವತಿಯಿಂದ ಬೆಳಗ್ಗೆ 11.30ಕ್ಕೆ ಟೌನ್ ಕ್ಲಬ್ ಆವರಣದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಮತ್ತು ಮದ್ದೂರು ಟೌನ್ ಕ್ಲಬ್ ವತಿಯಿಂದ ಶ್ರೀ ಬಿಜಿಎಸ್ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟೌನ್ ಕ್ಲಬ್ ಅಧ್ಯಕ್ಷ ಡಾ.ಬಿ.ಕೃಷ್ಣ ತಿಳಿಸಿದರು.
ಪಟ್ಟಣದ ಮದ್ದೂರು ಟೌನ್ ಕ್ಲಬ್‌ನಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಶಿಬಿರದಲ್ಲಿ ಬಿ.ಪಿ. ಷುಗರ್, ಇಸಿಜಿ ಹಾಗೂ ಅವಶ್ಯಕತೆ ಇದ್ದವರಿಗೆ ಎಕೋ, ಕಣ್ಣಿನ ದೋಷ, ಮೂಳೆ ಸಮಸ್ಯೆ ಹಾಗೂ ಸ್ತ್ರೀ ರೋಗ ತಜ್ಞರಿಂದ ಉಚಿತ ತಪಾಸಣೆ ಮತ್ತು ಮಾರ್ಗದರ್ಶನದ ಜತೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಔಷಧ ವಿತರಣೆ ಮಾಡಲಾಗುವುದು. ಅಂದಾಜು 1 ಸಾವಿರ ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಕೆ.ಎಂ.ಉದಯ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಮದ್ದೂರು ಟೌನ್ ಕ್ಲಬ್ ಅಧ್ಯಕ್ಷ ಡಾ.ಬಿ.ಕೃಷ್ಣ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ಪುರಸಭಾ ಮುಖ್ಯಾಧಿಕಾರಿ ಎಂ.ಮೀನಾಕ್ಷಿ, ಆರಕ್ಷಕ ವೃತ್ತ ನಿರೀಕ್ಷಕ ಎಂ.ಶಿವಕುಮಾರ್, ಮುಖ್ಯ ಗ್ರಂಥಾಲಯಾಧಿಕಾರಿಗಳಾದ ಕೃಷ್ಣಮೂರ್ತಿ, ಟಿ.ಎಂ.ವಜ್ರಮುನಿ ಭಾಗವಹಿಸಲಿದ್ದಾರೆಂದರು.
ಸಭೆಯಲ್ಲಿ ಮದ್ದೂರು ಟೌನ್ ಕ್ಲಬ್‌ನ ಗೌರವಾಧ್ಯಕ್ಷ ಚನ್ನಯ್ಯ, ಕಾರ್ಯದರ್ಶಿ ಎ.ದೊರೆಸ್ವಾಮಿ, ಸದಸ್ಯರಾದ ಎಂ.ಜಿ.ಶ್ರೀಕಂಠಯ್ಯ, ಕೃಷ್ಣ, ರಾಮಕೃಷ್ಣ, ಮುಖಂಡರಾದ ಪ್ರಭು, ರಮೇಶ್, ಚಂದ್ರು, ಶಿವಣ್ಣ, ಜಯಶಂಕರ್, ಸತೀಶ್, ಉಮೇಶ್ ಇದ್ದರು.