ಕುಶಾಲನಗರ:
ಕೊಡಗು ಜಿಲ್ಲಾ ವೀರವಶೈವ ಲಿಂಗಾಯತ ಸಮಾಜದಿಂದ ಆರಂಭಿಸಲಾಗುತ್ತಿರುವ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಉದ್ಘಾಟನಾ ಕಾರ್ಯಕ್ರಮ ಜ. ೨೨ ರಂದು ನಡೆಯಲಿದೆ. ಸೋಮೇಶ್ವರ ದೇವಾಲಯ ರಸ್ತೆಯಲ್ಲಿರುವ ಸಂಘವನ್ನು ಅಂದು ಬೆಳಗ್ಗೆ ೧೦.೩೦ಕ್ಕೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಉದ್ಘಾಟಿಸುವರು. ಕೊಡ್ಲಿಪೇಟೆ ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಮ್ಮತ್ತಿ ಕನ್ನಡ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಸಭಾಂಗಣ ಉದ್ಘಾಟಿಸುವರು. ಶನಿವಾರಸಂತೆ ಮುದ್ದಿನ ಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ, ಶನಿವಾರಸಂತೆ ಮನೆಹಳ್ಳಿ ತಪೋವನ ಕ್ಷೇತ್ರದ ಶ್ರೀ ಮಹಾಂತ ಶಿವಲಿಂಗಸ್ವಾಮೀಜಿ, ಶಿಡಿಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ ಎಂದು ಸಂಘದ ನಿರ್ದೇಶಕ ಹೆಚ್.ವಿ. ಶಿವಪ್ಪ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಧ್ಯಕ್ಷ ಟಿ.ಎಸ್. ಶಾಂಭಶಿವಯ್ಯ ಮಾತನಾಡಿ ಅಂದೇ ಬೆಳಗ್ಗೆ ೧೧ ಗಂಟೆಗೆ ಎಪಿಸಿಎಂಎಸ್ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ನೇತೃತ್ವ ವಹಿಸಲಿದ್ದಾರೆ. ಸಹಕಾರ ಸಂಘಗಳ ಉಪನಿಬಂಧಕ ಕೃಷ್ಣಪ್ರಸಾದ್ ಎ.ಆರ್., ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕಿ ಎಂ.ಎನ್. ಹೇಮಾವತಿ, ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಎನ್. ಆರ್. ನಾರಾಯಣ ರಾವ್, ಪ್ರಾಂತೀಯ ಅಧಿಕಾರಿ ಶಿವಕುಮಾರ ಬಿರದಾರ, ಅಖಿಲ ಭಾರತ ವೀರ ಶೈವ ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ವಿ. ಶಿವಪ್ಪ ಹಾಗೂ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಜವಾಹರ ಮುಗ್ಗನ್ನವರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಘದಲ್ಲಿ ಹಾಲಿ ೫೫೦ ಸದಸ್ಯರು ಇದ್ದು, ೧೩೦೦ ರೂ.ಕಟ್ಟಿ ಶೇರುದಾರರಾಗುವ ಅವಕಾಶ ಇದೆ ಎಂದರು.
ಸಂಘದ ಉಪಾಧ್ಯಕ್ಷ ಎಚ್.ಪಿ.ಉದಯ್ ಕುಮಾರ್, ನಿರ್ದೇಶಕ ಪುಟ್ಟರಾಜು ಇದ್ದರು.