ಮಂಡ್ಯ: ಕೀಲಾರದ ಕ್ಷೀರಸಾಗರ ಮಿತ್ರಕೂಟ ತನ್ನ ಬೆಳ್ಳಿಹಬ್ಬದ ನೆನಪಿಗಾಗಿ ಗ್ರಾಮದಲ್ಲಿ ನಿರ್ಮಾಣ ಮಾಡುತ್ತಿರುವ ಸಾಂಸ್ಕತಿಕ ಭವನದ ಮುಂದುವರಿದ ಕಾಮಗಾರಿಗೆ ಶಾಸಕರ ಅನುದಾನದಲ್ಲಿ 5 ಲಕ್ಷ ರೂ ನೀಡಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.
ತಾಲೂಕಿನ ಕೀಲಾರದಲ್ಲಿ ಮಂಡ್ಯ ಶುಗರ್ ಸಿಟಿ ಲಯನ್ಸ್ ಸರ್ವಿಸ್ ಫೌಂಡೇಷನ್ ಹಾಗೂ ಕ್ಷೀರಸಾಗರ ಮಿತ್ರಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ನಿತ್ಯ ಸಚಿವ ಕೆ.ವಿ.ಶಂಕರಗೌಡರ 108ನೇ ಜನ್ಮದಿನೋತ್ಸವದ ನೆನಪಿನಲ್ಲಿ ಪ್ರಾರಂಬಿಸಿರುವ ಉಚಿತ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕ್ಷೀರಸಾಗರ ಮಿತ್ರಕೂಟ ಕಳೆದ 25 ವರ್ಷದಿಂದ ಯುವಜನ ಚಟುವಟಿಕೆ, ಕಲೆ, ಸಾಹಿತ್ಯ, ಸಂಸ್ಕೃತಿ, ಸಂಘಟನೆ, ಪರಿಸರ ಸಂರಕ್ಷಣೆ ಹಾಗೂ ಸಮಾಜಮುಖಿ ಸೇವಾ ಚಟುವಟಿಕೆಗಳ ಮೂಲಕ ಕಾರ್ಯ ಮಾಡುತ್ತಿರುವುವು ಶ್ಲಾಘನೀಯ ಎಂದು ನುಡಿದರು.
ಲಯನ್ಸ್ ಸಂಸ್ಥೆಯ ಜಿಲ್ಲಾ ಮಾಜಿ ಗವರ್ನರ್ ಜಿ.ಎ.ರಮೇಶ್ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕಾಗಿ ಉಚಿತ ಹೊಲಿಗೆ ತರಬೇತಿ ಕೇಂದ್ರಗಳನ್ನು ಜಿಲ್ಲೆಯ ವಿವಿಧೆಡೆ ತೆರೆಯಲಾಗಿದೆ. ಈಗ ಕೀಲಾರ ಹಾಗೂ ಸುತ್ತಮುತ್ತಲಿನ ಹೆಣ್ಣುಮಕ್ಕಳ ಸ್ವಉದ್ಯೋಗದ ಅನುಕೂಲಕ್ಕಾಗಿ ಕ್ಷೀರಸಾಗರ ಮಿತ್ರಕೂಟದ ಸಹಕಾರದೊಂದಿಗೆ ಕೇಂದ್ರವನ್ನು ತೆರೆಯಲಾಗುತ್ತಿದೆ. ಈ ಕೇಂದ್ರಕ್ಕೆ ಹೊಲಿಗೆ ಯಂತ್ರಗಳು ಹಾಗೂ ಶಿಕ್ಷಕರ ಗೌರವಧನವನ್ನು ಭರಿಸಲಾಗುತ್ತದೆ ಎಂದು ಹೇಳಿದರು.
ಮಂಡ್ಯ ಶುಗರ್ ಸಿಟಿ ಲಯನ್ಸ್‌ನ ಕೆ.ಎಲ್.ರಾಜಶೇಖರ್, ಪ್ರತಿಮಾ ರಮೇಶ್, ಬೃಂದಾ ಸಿದ್ದೇಗೌಡ, ಕ್ಷೀರಸಾಗರ ಮಿತ್ರಕೂಟದ ಗೌರವಾಧ್ಯಕ್ಷ ಕೆ.ಪಿ.ವೀರಪ್ಪ, ಪೋಷಕರಾದ ಕೆ.ಕೆ.ರಾಧಾಕೃಷ್ಣ, ಡಿ.ಶಿವರಾಜು, ಕೆ.ಎಸ್.ಚಂದ್ರಶೇಖರ್, ಟಿ.ತಮ್ಮಯ್ಯ, ಅಧ್ಯಕ್ಷ ಕೆ.ಜಯಶಂಕರ್, ಸಂಚಾಲಕ ಕೀಲಾರ ಕೃಷ್ಣೇಗೌಡ, ಗ್ರಾ.ಪಂ ಅಧ್ಯಕ್ಷೆ ಕೆ.ಆರ್.ಪೂರ್ಣಿಮಾ, ಸದಸ್ಯರಾದ ಕೆ.ಕಾಳಯ್ಯ, ಕೆ.ಎಸ್.ರಮೇಶ್, ಕೆ.ಎನ್.ಪ್ರದೀಪ್, ಕೆ.ಸಿ.ಶ್ರೀಧರ್, ಕೆ.ಆರ್.ಶಿವಶಂಕರ್, ಕೆ.ಕಾಳೇಗೌಡ ಇತರರಿದ್ದರು.