ಜಿಲ್ಲೆ

ಎಸ್‌ಡಿಎಂ ಪಾಲಿಕ್ಲಿನಿಕ್ ಉದ್ಘಾಟನೆ

Dharwada - Vikram Nadiger

ಧಾರವಾಡ: ನಗರದ ಎಸ್‌ಡಿಎಂ ಆಸ್ಪತ್ರೆಯು ತನ್ನ ವಿಸ್ತೃತ ಕೇಂದ್ರವಾಗಿ ಎಸ್‌ಡಿಎಂ ಪಾಲಿಕ್ಲಿನಿಕ್ ಅನ್ನು ನಗರದ ಜುಬಿಲಿ ವೃತ್ತದಲ್ಲಿ ಆರಂಭಿಸಿದ್ದು, ಎಸ್‌ಡಿಎಂ ವಿಶ್ವ ವಿದ್ಯಾಲಯದ ಕುಲಪತಿ ಡಾ. ಡಿ. ವೀರೇಂದ್ರ ಹೆಗ್ಗಡೆ ಗುರುವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನಗರ ಹಾಗೂ ಸುತ್ತಲಿನ ಗ್ರಾಮಗಳ ಜನರಿಗೆ ಪಾಲಿಕ್ಲಿನಿಕ್ ತನ್ನ ಸೇವೆ ಒದಗಿಸಲಿದೆ. ವಾರದ ಎಲ್ಲ ದಿನಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ಹೊರ ರೋಗಿಗಳ ವಿಭಾಗ ಕಾರ್ಯ ನಿರ್ವಹಿಸಲಿದೆ. ಪ್ರಸ್ತುತ ಕ್ಲಿನಿಕ್‌ನಲ್ಲಿ ವೈದ್ಯಕೀಯ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ಚರ್ಮರೋಗ, ಸ್ತ್ರೀ ರೋಗ ಮತ್ತು ಪ್ರಸೂತಿ ಚಿಕಿತ್ಸೆ, ಮಕ್ಕಳ ಚಿಕಿತ್ಸಾ ಸೇವೆಗಳು ಸಿಗಲಿವೆ. ಜತೆಗೆ ಔಷಧಾಲಯ, ಕ್ಷ-ಕಿರಣ, ಅಲ್ಟ್ರಾ ಸೌಂಡ್ ಮತ್ತು ಲ್ಯಾಬೋರೆಟರಿ ಸೌಲಭ್ಯ ಸಹ ಸಿಗಲಿದೆ ಎಂದರು.
ಎಸ್‌ಡಿಎಂ ವಿವಿ ಉಪ ಕುಲಪತಿ ಡಾ. ನಿರಂಜನಕುಮಾರ, ಆಡಳಿತ ನಿರ್ದೇಶಕ ಸಾಕೇತ ಶೆಟ್ಟಿ, ಸಹ ಉಪ ಕುಲಪತಿ ವಿ. ಜೀವಂಧರ ಕುಮಾರ, ಡಾ. ಎಸ್.ಕೆ. ಜೋಶಿ, ಕುಲಸಚಿವ ಡಾ. ಚಿದೇಂದ್ರ ಶೆಟ್ಟರ, ಹಣಕಾಸು ಅಧಿಕಾರಿ ವಿ. ಜಿ. ಪ್ರಭು, ಎಸ್‌ಡಿಎಂ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಕಿರಣ ಹೆಗ್ಡೆ, ಅಂಗ ಸಂಸ್ಥೆಗಳ ಮುಖ್ಯಸ್ಥರು, ವಿಭಾಗಗಳ ಮುಖ್ಯಸ್ಥರು, ಇತರರು ಇದ್ದರು.