ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಬ್ಲಿಕ್ ಶಾಲೆಗಳು ಆರಂಭವಾಗಲಿವೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಪಂ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ‘ನನ್ನ ಶಾಲೆ ನನ್ನ ಕೊಡುಗೆ’ ಕಾರ್ಯಕ್ರಮದಡಿ ಸಿಎಸ್‌ಆರ್ ಅನುದಾನದ ಮಾದರಿ ಸರ್ಕಾರಿ ಶಾಲೆ ಯೋಜನೆಯಡಿ ದೇವನಹಳ್ಳಿಯ ವಿಶ್ವನಾಥಪುರದಲ್ಲಿ ಸೋಮವಾರ ಮಾದರಿ ಸರ್ಕಾರಿ ಶಾಲೆ ಮತ್ತು ನೂತನ ಶಾಲಾ ಕೊಠಡಿಗಳು ಹಾಗೂ ವಿವೇಕ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು. ಇಲ್ಲಿ ಇಂಗ್ಲಿಷ್ ಜತೆಗೆ ಕನ್ನಡ ಕಲಿಕೆಗೆ ಒತ್ತು ನೀಡಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳು ಒಳಗೊಂಡಂತೆ ಮುಂದಿನ ವರ್ಷ 600 ಪಬ್ಲಿಕ್ ಶಾಲೆಗಳನ್ನು ಆರಂಭಿಸುತ್ತಿದ್ದೇವೆ ಎಂದು ತಿಳಿಸಿದರು. ಖಾಸಗಿ ಶಾಲೆಗಳ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ವಾಹನ ಸೌಕರ್ಯ ಸೇರಿ ಎಲ್ಲ ವ್ಯವಸ್ಥೆ ಕಲ್ಪಿಸಲಾಗುವುದು. ಮೂರು ವರ್ಷಗಳಲ್ಲಿ 2 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುವ ಗುರಿ ಹೊಂದಿದ್ದು, 1ರಿಂದ 12 ನೇ ತರಗತಿವರೆಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಎಲ್ಕೆಜಿ ಮತ್ತು ಯುಕೆಜಿಯನ್ನೂ ಆರಂಭಿಸುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ 53 ಸಾವಿರ ಶಿಕ್ಷಕರ ಕೊರತೆ ಇದ್ದು, 13,500 ಶಿಕ್ಷಕರ ನೇಮಕಾತಿ ಕುರಿತ ತೀರ್ಪು ನ್ಯಾಯಾಲಯದಲ್ಲಿ ಬಾಕಿ ಇದೆ. ವ್ಯಾಜ್ಯ ಇತ್ಯರ್ಥವಾದರೆ ಸಾಕಷ್ಟು ಸಮಸ್ಯೆ ಬಗೆಹರಿಯಲಿದೆ. ಕಲ್ಯಾಣ ಕರ್ನಾಟಕದಲ್ಲಿ ಸಮಸ್ಯೆ ತಗ್ಗಲಿದೆ. ಇದರ ಜತೆಗೆ ಈ ಬಾರಿ ಜಾರಿಗೆ ತಂದ ಮೂರು ಪರೀಕ್ಷಾ ಪದ್ಧತಿ ಅಧ್ಯಯನಕ್ಕೆ ಪೂರಕವಾಗಿದ್ದು, ಕಳೆದ ತಿಂಗಳು ನಡೆದ ಮೂರನೇ ಪರೀಕ್ಷೆಯಲ್ಲಿ ಪಿಯುಸಿಯ 1.20 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರದಿದ್ದರು. ಫಲಿತಾಂಶ ಬಂದ ನಂತರ 42 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಇಂತಹ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್ ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ಸಿಎಸ್‌ಆರ್‌ನಡಿ ಹೆಚ್ಚಿನ ನೆರವು: ಸಿಎಸ್‌ಆರ್ ನಿಧಿಯಡಿ ಇನ್ನೂ ಹೆಚ್ಚಿನ ನೆರವು ದೊರಕಿಸಿಕೊಡುವುದಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಇದರಿಂದ ಮಾದರಿ ಶಾಲೆಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ಶಿಕ್ಷಣದಲ್ಲಿ ಕಲೆ, ಕ್ರೀಡೆ, ಸಂಸ್ಕೃತಿ ಹೀಗೆ ಸಮಗ್ರ ಶಿಕ್ಷಣ ನೀಡಿದರೆ ವ್ಯಕ್ತಿತ್ವ ನಿರ್ಮಾಣದ ಜತೆಗೆ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಲಿದೆ ಎಂದರು. ಸರ್ವಾಂಗೀಣ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ನಮಗೆ ಅಧಿಕಾರ ಇರುವಾಗ ಪಾಲಕರಿಗೆ ಹೊರೆಯಾಗದಂತೆ ಗುಣಮಟ್ಟ ಶಿಕ್ಷಣ ನೀಡುವುದು ನಮ್ಮ ಅಚಲ ಬದ್ಧತೆಯಾಗಿದೆ. ಮುಂದಿನ 2 ವರ್ಷದಲ್ಲಿ ನಮ್ಮ ವಿದ್ಯಾರ್ಥಿಗಳು ಸಿಇಟಿ, ನೀಟ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಮುಂದಿನ ಹಂತದ ಶಿಕ್ಷಣ ಪಡೆದರೆ ಸರ್ಕಾರದ ಶ್ರಮ ಸಾರ್ಥಕವಾಗುತ್ತದೆ ಎಂದರು.
ಸಿಎಂ ಬಣ್ಣನೆ: ಅನ್ನಭಾಗ್ಯ ಯೋಜನೆ ಬಡವರ ಬಗ್ಗೆ ಅವರಿಗೆ ಇರುವ ಕಾಳಜಿಯ ಪ್ರತೀಕವಾಗಿದೆ. ಜನರಿಗೆ ನೀಡಿದ ವಾಗ್ದಾನದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಸಿಎಂ ತೋರುತ್ತಿರುವ ಉತ್ಸುಕತೆ ಅವರ ಮುತ್ಸದ್ದಿತನಕ್ಕೆ ಸಾಕ್ಷಿಯಾಗಿದೆ. ಶಾಲೆಗಳ ಗುಣಮಟ್ಟ ಹೆಚ್ಚಿಸಲು ಅವರು ಪ್ರಯತ್ನ ನಡೆಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಶಾಲೆಗಳು ನಗರದ ಶಾಲೆಗಳಿಗೆ ಯಾವುದೇ ರೀತಿ ಕಡಿಮೆ ಇಲ್ಲದಂತೆ ನಿರ್ಮಿಸುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ಕಂಪೆನಿಗಳ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ ನಿಧಿಯಿಂದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ವಿಧಾನಪರಿಷತ್ ಸದಸ್ಯ ರವಿಕುಮಾರ್, ಶಾಸಕ ಶರತ್ ಬಚ್ಚೇಗೌಡ, ಧೀರಜ್ ಮುನಿರಾಜು, ಜಿಲ್ಲಾಧಿಕಾರಿ ಶಿವಶಂಕರ್, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಅನುರಾಧಾ ಮತ್ತಿತರರಿದ್ದರು.