ಜಿಲ್ಲೆ

ಶೋಷಿತರಿಗೆ ಸಾಮಾಜಿಕ ಶಕ್ತಿ ನೀಡಿದ ಸಂತ...

ಸಂಸದ ಕೋಟ ಪೂಜಾರಿ ಅನಿಸಿಕೆ

ಸೇವಾಲಾಲ್​ ಜಯಂತಿ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಮಾಜದಲ್ಲಿದ್ದ ನೂನ್ಯತೆ ಗುರುತಿಸಿ, ಎಲ್ಲರನ್ನೂ ಒಟ್ಗಾಗಿಸುವ ಮೂಲಕ ಸಂತ ಸೇವಾಲಾಲ್​ ಅವರು ಶೋಷಿತರಿಗೆ ಸಾಮಾಜಿಕ ಶಕ್ತಿ ನೀಡಿದ ಮಹನೀಯರು. ಸಮಾನತೆಯ ಬದುಕಿಗೆ ಹೆಚ್ಚು ಮಹತ್ವ ನೀಡಿದ್ದಲ್ಲದೆ, ಬಂಜಾರಾ ಸಮುದಾಯದ ಉನ್ನತಿಗಾಗಿ ಹೋರಾಡಿದ ಶ್ರೇಷ್ಠರು ಎಂದು ಸಂಸದ ಕೋಟ ಶ್ರೀನಿವಾಸ್​ ಪೂಜಾರಿ ಅನಿಸಿಕೆ ವ್ಯಕ್ತಪಡಿಸಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೃಷ್ಣನಗರಿ ಶ್ರೀ ಸಂತ ಸೇವಾಲಾಲ್​ ಬಂಜಾರಾ ಸಂಘ ಉಡುಪಿ ಜಿಲ್ಲೆ ಆಶ್ರಯದಲ್ಲಿ ಫೆ.15ರಂದು ಆಯೋಜಿಸಿದ್ದ ಸಂತ ಸೇವಾಲಾಲ್​ ಜಯಂತಿ ಉದ್ಘಾಟಿಸಿ ಮಾತನಾಡಿದರು.

 ಹಕ್ಕುಗಳ ಹೋರಾಟ

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ, ಸೇವಾಲಾಲ್​ ಅವರು ಸಮುದಾಯಗಳನ್ನೆಲ್ಲ ಒಗ್ಗೂಡಿಸಿ ಹಕ್ಕುಗಳ ಹೋರಾಟಕ್ಕಾಗಿ ಪ್ರೇರೇಪಿಸಿದ್ದರು. ಬಂಜಾರಾ ಸಮುದಾಯದ ಶಕ್ತಿ, ಆತ್ಮವಿಶ್ವಾಸ ಹೆಚ್ಚಿಸಿ ಅವರ ಏಳಿಗೆಯಲ್ಲಿ ಅಪಾರವಾಗಿ ಶ್ರಮಿಸಿದ್ದರು. ಅವರ ತ್ಯಾಗ ಹಾಗೂ ಚಿಂತನೆಯನ್ನು ಜನಮಾನಸಕ್ಕೆ ತಲುಪಿಸಲು ಸರ್ಕಾರವೇ ಸಂತರ ಜಯಂತಿ ಆಯೋಜಿಸುತ್ತಿದೆ ಎಂದರು.

ಸೇವಾಲಾಲ್ ಹಾಕಿಕೊಟ್ಟ ಅಡಿಪಾಯ

ಕೃಷ್ಣನಗರಿ ಸಂತ ಶ್ರೀ ಸೇವಾಲಾಲ್​ ಬಂಜಾರ ಸಂಘದ ಜಿಲ್ಲಾಧ್ಯಕ್ಷ ಕುಮಾರ್​ ಕೆ.ಎಂ. ಮಾತನಾಡಿ, ಬಂಜಾರಾ ಸಮುದಾಯದಲ್ಲಿ ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆದು ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೆ ಸೇವಾಲಾಲ್​ ಅವರು ಹಾಕಿಕೊಟ್ಟ ಅಡಿಪಾಯ ಹಾಗೂ ಉಪದೇಶಗಳೇ ಕಾರಣವಾಗಿದೆ ಎಂದರು.

ಸಂತ ಸೇವಾಲಾಲ್​ ಹಾಗೂ ಬಂಜಾರಾ ಸಮುದಾಯದ ಆಚಾರ-ವಿಚಾರಗಳ ಕುರಿತು ಕಾಪುವಿನ ಕಳತ್ತೂರು ಪಿಕೆಎಸ್​ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗಂಗಾ ನಾಯ್ಕ್​ ಎಲ್​. ಉಪನ್ಯಾಸ ನೀಡಿದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೆರೂರು, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಹಾಕಪ್ಪ ಲಮಾಣಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸೇವಾಲಾಲ್​ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಕಾರ್ಯಕ್ರಮ ನಿರ್ವಹಿಸಿದರು.