ವಿಜಯವಾಣಿ ಸುದ್ದಿಜಾಲ ಉಡುಪಿ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಸಂಸ್ಥೆ ಸ್ಥಾಪಿಸಿ, ಬೆಳೆಸುವುದು ಸುಲಭದ ಕಾರ್ಯವಲ್ಲ. ಎಷ್ಟೊಂದು ಸಮಸ್ಯೆ, ಹೋರಾಟ, ಉಗ್ರ ವ್ಯವಸ್ಥೆ, ಸ್ಪರ್ಧೆ, ಸಮಾಜ ಎದುರಿಸಿ ಕಲಾವಿದ ಹಾಗೂ ಸಂಸ್ಥೆ ಬೆಳೆದು ಬದುಕಬೇಕಿದೆ. ಇದರೊಟ್ಟಿಗೆ ಈಗ ಕೃತಕ ಬುದ್ಧಿಮತ್ತೆ (ಎಐ)ಯು ಕಲೆ, ಕಲಾವಿದರಿಗೆ ತೊಡಕಾಗಬಹುದು ಎಂದು ಚಿಂತಕ ಡಾ. ಬಿ.ಭಾಸ್ಕರ್ ರಾವ್ ಆತಂಕ ವ್ಯಕ್ತಪಡಿಸಿದರು.
ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜ್ಞಾನಂ ಟ್ರಸ್ಟ್, ಲಾಂಛನ ಅನಾವರಣ ಮತ್ತು ವಿದುಷಿ ಸಂಸ್ಕೃತಿ ಪ್ರಭಾಕರ್ ಅವರ ಏಕವ್ಯಕ್ತಿ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ನಾಡೋಜ ಪ್ರೊ.ಕೆ.ಪಿ. ರಾವ್ ಮಾತನಾಡಿ, ಕೃತಕ ಬುದ್ಧಿಮತ್ತೆಯು ಅಧ್ಯಯನ ಸಮಯ ಉಳಿಸಿ ಜ್ಞಾನ, ಅರಿವು ಹೆಚ್ಚಿಸುತ್ತದೆ. ಅಲ್ಲದೆ, ಕ್ರಿಯಾಶೀಲತೆ ಬದಲಾಯಿಸಲು ಪೂರಕವಾಗಲಿದೆ. ಹೀಗಾಗಿ ಆತಂಕ ಬೇಡ. ಯಂತ್ರಗಳಿಗೂ ಭಾಷೆ, ಸಂಬಂಧ ಕಲಿಸುವುದರಿಂದ ಮಾಹಿತಿ, ಬುದ್ಧಿಮತ್ತೆ, ವಿವೇಕದ ಹಾದಿಯನ್ನೇ ತೋರಲಿದೆ ಎಂದು ಅಭಿಪ್ರಾಯಪಟ್ಟರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿದರು. ನಾಟಕ ರಚಿಸಿದ ಸಾಹಿತಿ ಸುಧಾ ಆಡುಕಳ ಮಾತನಾಡಿದರು.
ನಾಟಕ ನಿರ್ದೇಶಕ ಗಣೇಶ್ ರಾವ್ ಎಲ್ಲೂರು ಅವರನ್ನು ಸನ್ಮಾನಿಸಲಾಯಿತು. ಶಾಶ್ವತಿ ಭಟ್ ಪ್ರಾರ್ಥಿಸಿದರು. ಜಿ.ಪಿ. ಪ್ರಭಾಕರ್ ತುಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಷಾ ಪೆರ್ಡೂರು ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದುಷಿ ಸಂಸ್ಕೃತಿ ಪ್ರಭಾಕರ್ ಅವರಿಂದ ಹೆಜ್ಜೆಗೊಲಿದ ಬೆಳಕು (ನಾಟ್ಯ ರಾಣಿ ಶಾಂತಲೆಯ ಆತ್ಮವೃತ್ತ) ಎಂಬ ಏಕವ್ಯಕ್ತಿ ನಾಟಕ ಪ್ರದರ್ಶನಗೊಂಡಿತು.