ಮೈಸೂರು: ನಗರದ ವಾಣಿವಿಲಾಸ ಮೊಹಲ್ಲಾದಲ್ಲಿರುವ ಕೆ.ಎಚ್.ರಾಮಯ್ಯ ಉಚಿತ ವಿದ್ಯಾರ್ಥಿನಿಲಯದಲ್ಲಿರುವ ನವೀಕರಣಗೊಂಡ ಸಾಹುಕಾರ ಎಸ್.ಚನ್ನಯ್ಯ ಮಹಲ್ ಕಟ್ಟಡವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕೆ.ಎಚ್.ರಾಮಯ್ಯ ಟ್ರಸ್ಟ್‌ನ ಅಧ್ಯಕ್ಷ ಚಂದ್ರ ಪ್ರಕಾಶ್ ಮಾತನಾಡಿ, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ 1937ರಲ್ಲಿ ಎನ್.ಜಿ.ಗುಜ್ಜೇಗೌಡರು ಸ್ಥಾಪಿಸಿದ ಈ ವಿದ್ಯಾರ್ಥಿನಿಲಯ ಕೇವಲ 12 ವಿದ್ಯಾರ್ಥಿಗಳಿಂದ ಶುರುವಾಗಿ ಇಂದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿಯನ್ನು ನೀಡಿದೆ. ಇಲ್ಲಿಂದ ಹೊರಹೋದ ಸಾವಿರಾರು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಎನ್.ಜಿ.ಗುಜ್ಜೇಗೌಡ ಡಿಜಿಟಲ್ ಲೈಬ್ರರಿಯನ್ನು ಉದ್ಘಾಟಿಸಿ ಮಾತನಾಡಿದ ಹಳೇ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಎಂ.ಕೆ.ಶಂಕರಲಿಂಗೇಗೌಡ ಅವರು, ಇಂದಿನ ಯುಗಕ್ಕೆ ವಿದ್ಯಾರ್ಥಿಗಳು ಕೇವಲ ಔಪಚಾರಿಕ ಶಿಕ್ಷಣ ಪಡೆಯುವುದರಿಂದ ಹೆಚ್ಚಿನ ಲಾಭವಿಲ್ಲ. ಪದವಿ, ಸ್ನಾತಕೋತ್ತರ ಪದವಿಗಳ ಜತೆಗೆ ಕೌಶಲಾಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು. ಅಗತ್ಯ ತಂತ್ರಜ್ಞಾನ, ಸಂಹವನ ಕುಶಲತೆ, ತಾಂತ್ರಿಕ ನಿಪುಣತೆ ಪಡೆಯಲು ಶ್ರಮವಹಿಸಬೇಕೆಂದು ತಿಳಿಸಿದರು.
ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ, ನಿವೃತ್ತ ಕೆಎಎಸ್ ಅಧಿಕಾರಿ ಡಾ.ಪಿ.ಬೋರೇಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿನಿಲಯದಲ್ಲಿ ನವ ತಂತ್ರಜ್ಞಾನ ಕಲಿಯಲು ಬೇಕಾದ ವ್ಯವಸ್ಥೆ ಮಾಡಲಾಗುವುದು. ಜತೆಗೆ, ಕೃಷಿಕ್ ಸರ್ವೋದಯ ಫೌಂಡೇಷನ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಾಗಲು ಅನುಕೂಲವಾಗುವಂತೆ ತರಗತಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಸಂಘದ ಉಪಾಧ್ಯಕ್ಷ ಡಾ.ಅಪ್ಪಾಜಿಗೌಡ ಮಾತನಾಡಿದರು.
ಯಶೋದಾರಮ್ಮ ದಾಸಪ್ಪ ವಿದ್ಯಾರ್ಥಿನಿಯರ ಹಾಸ್ಟೆಲ್ ಟ್ರಸ್ಟಿ ಸರೋಜಮ್ಮ ತುಳಸಿದಾಸ್, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಮಹಾರಾಜ ಇಂಜಿನಿಯರಿಂಗ್ ಕಾಲೇಜಿನ ಕಾರ್ಯದರ್ಶಿ ಡಾ.ಚೇತನ್, ಮುಖಂಡರಾದ ಕೆಂಪರಾಜೇಗೌಡ, ಕೃಷ್ಣಪ್ಪ, ಬಿ.ಎಸ್.ಭೂಷಣ್, ಯದುನಂದನ್, ಚೌಡಪ್ಪ, ವರುಣ್, ದರ್ಶನ್, ಅಂಕೇಗೌಡ, ಕೆ.ಎಸ್.ನಿಂಗಪ್ಪ, ಪ್ರಕಾಶ್, ನಾಗರಾಜೇಗೌಡ ಇನ್ನಿತರರಿದ್ದರು.