ಜಿಲ್ಲೆ

ಸಿದ್ಧಾರೂಢಮಠದಲ್ಲಿ ವಾಸ್ತವ್ಯ ಹಾಲ್ ಉದ್ಘಾಟನೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ಮಠದ ಆವರಣದಲ್ಲಿ ನಿರ್ವಿುಸಿರುವ ಸಾರ್ವಜನಿಕರ ವಾಸ್ತವ್ಯದ ಹಾಲ್​ಗಳನ್ನು ಸೋಮವಾರ ಉದ್ಘಾಟಿಸಲಾಯಿತು.

ಶ್ರೀಮಠದಲ್ಲಿ ಪೂಜೆ ಸಲ್ಲಿಸಲು ವಾಸ್ತವ್ಯಕ್ಕೆ ಬಂದು, ವಿಶ್ರಾಂತಿ ಮಾಡುವ ಭಕ್ತಾದಿಗಳಿಗೆ ಒಂದು ಚಾಪೆ ಹಾಗೂ ಒಂದು ತಲೆದಿಂಬು ಕೊಡಲಾಗುವುದು. ಇನ್ನು ಮುಂದೆ ಭಕ್ತಾದಿಗಳು ಹಗಲು ಹಾಗೂ ರಾತ್ರಿ ಸಮಯದಲ್ಲಿ ಕೈಲಾಸ ಮಂಟಪದಲ್ಲಿ ಮಲಗಿ ವಿಶ್ರಾಂತಿ ಪಡೆಯಲು ಅವಕಾಶ ಇರುವುದಿಲ್ಲ. ಕೈಲಾಸ ಮಂಟಪದಲ್ಲಿ ಶ್ರೀ ಸಿದ್ಧಾರೂಢರು ಪ್ರವಚನ ಹೇಳುತ್ತಿದ್ದರು. ಈಗಲು ಸಹ ಕೈಲಾಸ ಮಂಟಪದಲ್ಲಿ ಶ್ರೀ ಸಿದ್ಧಾರೂಢರ ಕೀರ್ತನೆ, ಭಜನೆ ಭಕ್ತಿಯಿಂದ ಓಂ ನಮಃ ಶಿವಾಯ ಹೇಳುವ ಕಾರ್ಯಗಳಿಗಾಗಿ ಮೀಸಲಿಡಲಾಗಿದೆ.

ಶ್ರೀಮಠದ ಆಡಳಿತ ಮಂಡಳಿಯವರು ಧರ್ಮಸ್ಥಳ ಮಾದರಿಯಲ್ಲಿ ಹೊಸದಾಗಿ ವಿಶ್ರಾಂತಿ ಧಾಮ ನಿರ್ಮಾಣ ಮಾಡಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಶ್ರೀಮಠದ ಕಾರ್ಯಾಲಯದಿಂದ ಪಡೆಯಬಹುದಾಗಿದೆ. ಈ ಸಾರ್ವಜನಿಕ ವಾಸ್ತವ್ಯದ ವಸತಿ ನಿಲಯಗಳನ್ನು ಶ್ರೀಮಠದ ಧರ್ಮದರ್ಶಿ ರಮೇಶ ಬೆಳಗಾವಿ ಉದ್ಘಾಟಿಸಿದರು. ಶ್ರೀಮಠದ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ, ವೈಸ್ ಚೇರ್ಮನ್ ಮಂಜುನಾಥ ಮುನವಳ್ಳಿ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ, ಉದಯಕುಮಾರ ನಾಯ್ಕ, ಚೆನ್ನವೀರ ಮುಂಗುರವಾಡಿ, ಮ್ಯಾನೇಜರ್ ಈರಣ್ಣ ತುಪ್ಪದ, ಶ್ರೀಮಠದ ಸಿಬ್ಬಂದಿ ಮತ್ತು ಭಕ್ತರು ಉಪಸ್ಥಿತರಿದ್ದರು.