ಬೆಂಗಳೂರು: ದೆಹಲಿಯಲ್ಲಿ ಇರುವಂತೆ ಬೆಂಗಳೂರಿನ ವಿಜಯನಗರದಲ್ಲಿ ಪಾಲಿಕೆ ಬಜಾರ್ ನಿರ್ಮಿಸಲಾಗಿದ್ದು, ಭಾನುವಾರ (ಆ.25) ಲೋಕಾರ್ಪಣೆಯಾಗಲಿದೆ.
ನಗರದಲ್ಲಿ ಮೊದಲ ಬಾರಿ ಸಂಪೂರ್ಣ ಹವಾನಿಯಂತ್ರಿತ ಸೌಲಭ್ಯವುಳ್ಳ ಈ ವಿನೂತನ ಮಾರುಕಟ್ಟೆಯು (ನೆಲಮಾಳಿಗೆ ಮಾದರಿ) ಸಾರ್ವಜನಿಕರಿಗೆ ಹೊಸ ಅನುಭವ ನೀಡಲಿದೆ. ಯಾವುದೇ ಗೌಜು, ಗದ್ದಲ ಇಲ್ಲದೆ ಸುಲಭವಾಗಿ ಖರೀದಿ ಪ್ರಕ್ರಿಯೆ ನಡೆಸಲು ನಾಗರಿಕ ಸ್ನೇಹಿ ಸೌಲಭ್ಯವನ್ನು ಒದಗಿಸಲಾಗಿದೆ. ನಿರ್ಮಾಣ ವೇಳೆ ಕಾಮಗಾರಿ ವಿಳಂಬ ಆಗಿದ್ದರಿಂದ 2&3 ಬಾರಿ ಗಡುವು ಮೀರಿದರೂ, ಈಗ ಉದ್ಘಾಟನೆಗೆ ಸಜ್ಜುಗೊಳಿಸಲಾಗಿದೆ. ಪಾಲಿಕೆ ಬಜಾರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಸಂಜೆ 6 ಗಂಟೆಗೆ ಉದ್ಘಾಟಿಸಲಿದ್ದಾರೆ. ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಅಧ್ಯತೆಯಲ್ಲಿ ವಹಿಸಲಿದ್ದು, ಶಾಸಕ ಪ್ರಿಯಕೃಷ್ಣ ಹಾಗೂ ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ವಿಜಯನಗರದ ಮೆಟ್ರೋ ನಿಲ್ದಾಣಕ್ಕೆ ಸಮೀಪದಲ್ಲಿ ನಿರ್ಮಿಸಿರುವ ಈ ವಿನೂತನ ಮಾದರಿಯ ಮಾರುಕಟ್ಟೆಯಲ್ಲಿ ಒಟ್ಟು 79 ಮಳಿಗೆಗಳು ಇವೆ. ಈ ಬಜಾರ್ನ ಫ್ಲೋರಿಂಗ್ ಸಂಪೂರ್ಣ ಗ್ರಾನೈಟ್ ಕಲ್ಲಿನಲ್ಲಿ ಮಾಡಲಾಗಿದೆ, ಸೆನ್ಸರ್ ಹೊಂದಿದ 3 ಗಾಜಿನ ಸ್ಲೈಡಿಂಗ್ ಬಾಗಿಲು, 2 ಎಸ್ಕಲೇಟರ್ ಮತ್ತು ಲಿಫ್ಟ್ ಸೌಲಭ್ಯ ಹೊಂದಿದೆ. ಒಟ್ಟು 26 ಒಳಾಂಗಣ ಎಸಿ ಯೂನಿಟ್ಗಳಿವೆ. ಒಂದು ವಿದ್ಯುತ್ ಕೊಠಡಿ, ಒಂದು ಸ್ಟೋರ್ ಹಾಗೂ ಆಫೀಸ್ ರೂಂ, ಒಟ್ಟು 8 ಪ್ರವೇಶ, ನಿರ್ಗಮನ ಪಾಯಿಂಟ್ಗಳಿದ್ದು ಸುಲಭವಾಗಿ ಸಂಚರಿಸಬಹುದಾಗಿದೆ. ಪ್ರತಿ ಅಂಗಡಿಯಲ್ಲೂ ಅಗ್ನಿ ನಿಯಂತ್ರಕಗಳಿದ್ದು, ಶುದ್ಧ ಗಾಳಿ ಹಾಗೂ ಬೆಳಕಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಯೋಜನೆಗೆ 13 ಕೋಟಿ ರೂ. ವೆಚ್ಚ:
ನೆಲಮಾಳಿಗೆಯ ಪಾಲಿಕೆ ಬಜಾರ್ 100 ಮೀ. ಉದ್ದ ಹಾಗೂ 11 ಮೀ. ಅಗಲವಿದೆ. ಜತೆಗೆ 3 ಮೀ. ಅಗಲದ ಪಾದಚಾರಿ ಮಾರ್ಗವೂ ಇದ್ದು, ಎರಡೂ ಬದಿಗೆ ಮಳಿಗೆಗಳಿವೆ. ಮಾರುಕಟ್ಟೆಗೆ ಮಳೆನೀರು ಹರಿಯದಂತೆ ಸುತ್ತಲೂ ಪ್ರತ್ಯೇಕ ಕೊಳವೆ ಮಾರ್ಗ ನಿರ್ಮಿಸಿ ಮಳೆ ನೀರು ಮುಖ್ಯರಸ್ತೆಯಲ್ಲಿನ ಚರಂಡಿಗೆ ಹರಿಯುವಂತೆ ಮಾಡಲಾಗಿದೆ. ಈ ಯೋಜನೆಗೆ ಒಟ್ಟು 13 ಕೋಟಿ ರೂ. ವೆಚ್ಚ ಮಾಡಲಾಗಿದೆ. ನಗರೋತ್ಥಾನ ಯೋಜನೆಯಡಿ 5 ಕೋಟಿ ರೂ. ಹಾಗೂ ಸಿಎಂ ನವ ನಗರೋತ್ಥಾನ ಯೋಜನೆಯಡಿ 8 ಕೋಟಿ ರೂ. ಬಳಸಿಕೊಳ್ಳಲಾಗಿದೆ.
2019ರ ಡಿಸೆಂಬರ್ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಒಂದೆರಡು ಬಾರಿ ಕಾರಣಾಂತರದಿಂದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಇದೀಗ ಪೂರ್ಣಗೊಂಡಿದೆ.
ಬಜಾರ್ ಪರಿಶೀಲನೆ ನಡೆಸಿದ ಶಾಸಕ:
ಉದ್ಘಾಟನೆಗೆ ಸಿದ್ಧವಾಗಿರುವ ನೂತನ ನೆಲಮಾಳಿಗೆ ಮಾರುಕಟ್ಟೆಯನ್ನು ಸ್ಥಳಿಯ ಶಾಸಕ ಎಂ.ಕೃಷ್ಣಪ್ಪ ಶುಕ್ರವಾರ ಪರಿಶೀಲನೆ ನಡೆಸಿದರು. ಮಳಿಗೆಗಳ ಗುಣಮಟ್ಟ ಸೇರಿ ವಿವಿಧ ಸೌಲಭ್ಯಗಳ ಬಗ್ಗೆ ಶಾಸಕರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಉದ್ಘಾಟನೆ ನಂತರವೂ ಪಾಲಿಕೆ ಬಜಾರ್ ನಿರ್ವಹಣೆಯನ್ನು ಯಾವುದೇ ಸಮಸ್ಯೆ ಬಾರದಂತೆ ಕೈಗೊಳ್ಳಬೇಕು ಎಂದು ಸೂಚಿಸಿದರು.