ಜಿಲ್ಲೆ

ಆನ್​ಲೈನ್​ ನೋಂದಣಿ ಆ್ಯಪ್​ ಉದ್ಘಾಟನೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಸತ್ತೂರಿನ ಎಸ್​ಡಿಎಂ ವಿಶ್ವ ವಿದ್ಯಾಲಯದ ಹೊರ ರೋಗಿಗಳ ಅನುಕೂಲಕ್ಕಾಗಿ ಆನ್​ಲೈನ್​ ಮೂಲಕ ನೋಂದಣಿಗೆ ಆರಂಭಿಸಿರುವ ಅಪ್ಲಿಕೇಷನ್​ ಅನ್ನು ಎಸ್​ಡಿಎಂ ವಿಶ್ವ ವಿದ್ಯಾಲಯದ ಕುಲಪತಿ ಡಾ. ಡಿ. ವೀರೇಂದ್ರ ಹೆಗ್ಗಡೆ ಇತ್ತೀಚಿಗೆ ಉದ್ಘಾಟಿಸಿದರು.
ಈ ಆ್ಯಪ್​ನಲ್ಲಿ ಹು-ಧಾದ ಪಾಲಿಕ್ಲಿನಿಕ್​ಗಳಲ್ಲಿ ವೈದ್ಯರ ಲಭ್ಯತೆ ಬಗ್ಗೆ ಮಾಹಿತಿ ಹಾಗೂ ರೋಗಿಗಳು ತಮಗೆ ಅನುಕೂಲದ ಸಮಯ ನಿಗದಿಪಡಿಸಿಕೊಳ್ಳಬಹುದು. ಇದು ಶೀಘ್ರದಲ್ಲೇ ಗೂಗಲ್​ ಪ್ಲೇ ಸ್ಟೋರ್​ ಮತ್ತು ಆ್ಯಪಲ್​ ಸ್ಟೋರ್​ಗಳಲ್ಲಿ ಲಭ್ಯವಾಗಲಿದೆ.
ಉಪ ವೈದ್ಯಕಿಯ ಅಧೀಕ್ಷಕ ಡಾ. ಮಕ್ದುಮ್​ ಕಿಲ್ಲೇದಾರ ಅವರು ಪ್ರಾತ್ಯಕ್ಷಿಕೆ ಮೂಲಕ ಆ್ಯಪ್​ಗಳ ಮಾಹಿತಿ ನೀಡಿದರು. ನಂತರ ಎಸ್​ಡಿಎಂ ಆಸ್ಪತ್ರೆಯ ಯುರಾಲಜಿ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಥುಲಿಯಮ್​ ಲೇಸರ 60 ವ್ಯಾಟ್​ ಯಂತ್ರ ಮತ್ತು ಫ್ಲೆಕ್ಸಿಬಲ್​ ಯುರೆಟೆರೊಸ್ಕೋಪ್​ ಅನ್ನು ಡಾ. ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.
ಇದು ಪ್ರಸ್ತುತ ವಿಶ್ವದ ಆಧುನಿಕ ಲೇಸರ್​ ತಂತ್ರಜ್ಞಾನವಾಗಿದ್ದು, ಇದರ ಸಹಾಯದಿಂದ ಮೂತ್ರಪಿಂಡ, ಮೂತ್ರನಾಳದ ಕಲ್ಲುಗಳು, ಮೂತ್ರಪಿಂಡದ ಕ್ಯಾನ್ಸರ್​, ವಿವಿಧ ಮೂತ್ರಶಾಸ್ತ್ರದ ಸಮಸ್ಯೆಗಳಿಗೆ ರಕ್ತಸ್ರಾವವಿಲ್ಲದೆ, ಕಡಿಮೆ ನೋವು, ಶಸ್ತ್ರ ಚಿಕಿತ್ಸೆ ನಂತರದ ಗಾಯಗಳಿಲ್ಲದೆ ಚಿಕಿತ್ಸೆ ನೀಡಬಹುದಾಗಿದೆ. ಶೀಘ್ರವಾಗಿ ಚೇತರಿಸಿಕೊಳ್ಳಲು ಇದು ಸಹಕಾರಿಯಾಗಿದೆ. ಅಷ್ಟೇಯಲ್ಲದೆ ಹೃದಯ ಸಂಬಂಧಿ ಕಾಯಿಲೆಗಳಿಗೂ ಯಂತ್ರವನ್ನು ಬಳಸಬಹುದಾಗಿದೆ.
ಉಪ ಕುಲಪತಿ ಡಾ. ನಿರಂಜನಕುಮಾರ, ಉಪಾಧ್ಯರಾದ ಡಿ. ಸುರೇಂದ್ರ ಕುಮಾರ, ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್​, ಆಡಳಿತ ನಿರ್ದೇಶಕ ಸಾಕೇತ್​ ಶೆಟ್ಟಿ, ಸಹ ಉಪ ಕುಲಪತಿ ವಿ. ಜೀವಂಧರ ಕುಮಾರ, ಕುಲಸಚಿವ ಡಾ. ಚಿದೇಂದ್ರ ಶೆಟ್ಟರ, ಪ್ರಾಂಶುಪಾಲ ಡಾ. ರತ್ನಮಾಲಾ ದೇಸಾಯಿ, ಡಾ. ಶ್ರೀನಿವಾಸ ಕಲಭಾವಿ, ಡಾ. ಕಿರಣ ಹೆಗ್ಡೆ ಉಪಸ್ಥಿತರಿದ್ದರು.