ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಆನ್‌ಲೈನ್ ಕಾರ್ಯಕ್ರಮಕ್ಕೆ ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಚಾಲನೆ ನೀಡಿದರು. ಶ್ರೀಕಾಂತ ಬಡದಾಳೆ, ವಿವೇಕಾನಂದ ಹೊದಲೂರೆ, ಡಾ.ಮಲ್ಲಿಕಾರ್ಜುನ ಲಕಶೆಟ್ಟಿ, ಡಾ.ಭೀಮಾಶಂಕರ ಬಿರಾದಾರ ಇತರರಿದ್ದರು. 
ಜಿಲ್ಲೆ

ಸಕಾರಾತ್ಮಕ ಆಲೋಚನೆಯಿಂದ ಬದಲಾವಣೆ ಸಾಧ್ಯ

ರಾಜು ಯಮಕನಮರಡಿ

ಬಸವಕಲ್ಯಾಣ: ಧನಾತ್ಮಕ ಆಲೋಚನೆಗಳಿಂದ ಬದುಕಿನಲ್ಲಿ ಬದಲಾವಣೆ ಕಂಡುಕೊಳ್ಳಲು ಸಾಧ್ಯ ಎಂದು ಮಂಡ್ಯ ಜಿಲ್ಲೆಯ ಪೊಲೀಸ್ ಇಲಾಖೆಯ ಯೋಗಕ್ಷೇಮ ಅಧಿಕಾರಿ ಹಾಗೂ ಮನೋವಿಜ್ಞಾನಿ ಸಂದೀಪ ಬಿ.ಎಚ್. ಹೇಳಿದರು.

ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜು ಹಾಗೂ ಮಂಡ್ಯದ ಬಾಂಧವ್ಯ ಫೌಂಡೇಷನ್ ಸಹಯೋಗದಲ್ಲಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಮಾನಸಿಕ ಆರೋಗ್ಯ ಸವಾಲು ಮತ್ತು ಸಾಧ್ಯತೆಗಳ ಕುರಿತು ಆನ್‌ಲೈನ್ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಉತ್ತಮ ಹವ್ಯಾಸ, ಧ್ಯಾನ, ಸೃಜನಶೀಲತೆ ಮತ್ತು ಸದಾ ಕ್ರಿಯಾಶೀಲತೆಯಲ್ಲಿ ತೊಡಗುವುದರಿಂದ ಮಾನಸಿಕ ಒತ್ತಡಗಳಿಂದ ಬಿಡುಗಡೆ ಸಾಧ್ಯ ಎಂದರು.

ಸಮಕಾಲಿನ ಸಂದರ್ಭದಲ್ಲಿ ಜಗತ್ತು ನಕಾರಾತ್ಮಕತೆ ಕಡೆಗೆ ಹೆಚ್ಚು ಆಕರ್ಷಿತವಾಗುತ್ತದೆ. ಮಧ್ಯಪಾನ, ಧೂಮ್ರಪಾನ, ಮಾದಕ ವಸ್ತುಗಳು ಅತಿಯಾದ ಚಟಗಳು, ಮೊಬೈಲ್ ಬಳಕೆ, ಅಂತರಜಾಲದ ಗೀಳು, ಸಾಮಾಜಿಕ ಜಾಲತಾಣಗಳ ಬಳಕೆ ಹಲವು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಿವೆ ಎಂದು ತಿಳಿಸಿದರು.

ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮನಸ್ಸು ಚೆನ್ನಾಗಿದ್ದರೆ ಎಲ್ಲವೂ ಸಾಧಿಸಬಹುದು. ಮನಸ್ಸು ವಿಕಾರವಾದರೆ ಇಡೀ ಜೀವನ ಸಮಸ್ಯೆ ಸುಳಿಗೆ ಸಿಲುಕಬಹುದು. ಉತ್ತಮ ಕೃತಿಗಳ ಅಧ್ಯಯನ, ಒಳ್ಳೆಯ ಹವ್ಯಾಸದಲ್ಲಿ ತೊಡಗಿಸಿಕೊಳ್ಳುವದರಿಂದ ಮಾನಸಿಕ ಸಮಸ್ಯೆಗಳಿಂದ ಮುಕ್ತರಾಗಬಹುದು ಎಂದರು.

ಬಿಡಿಪಿಸಿ ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಸಹಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ಸಂಸ್ಥೆ ಆಡಳಿತಾಧಿಕಾರಿ ಡಾ.ಮಲ್ಲಿಕಾರ್ಜುನ ಲಕಶೆಟ್ಟಿ, ಗಂಗಾಧರ ಸಾಲಿಮಠ, ಸಂಗೀತಾ ಮಹಾಗಾಂವೆ, ಪ್ರವೀಣ ಬಿರಾದಾರ, ರೋಷನ್ ಬಿ., ಚನ್ನಬಸಪ್ಪ ಗೌರ, ಸೌಮ್ಯ ಕರಿಗೌಡ, ಗುರುದೇವಿ ಖಿಚಡೆ, ನಿಲ್ಲಮ್ಮ ಮೇತ್ರೆ, ಮಾಲಾಶ್ರೀ ತಾಂಬೋಳೆ, ಸಚ್ಚಿನ್ ಬಿಡವೆ, ವಿವೇಕಾನಂದ ಶಿಂದೆ, ಕರಣ ಮಲ್ಲಿಕಾರ್ಜುನ ವಾಡಿ, ಅಶೋಕರೆಡ್ಡಿ ಗದಲೇಗಾಂವ ಇತರರಿದ್ದರು.

ಡಾ. ಭೀಮಾಶಂಕರ ಬಿರಾದಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಬಸವರಾಜ ಖಂಡಾಳೆ ವಂದಿಸಿದರು. ಶ್ರೀನಿವಾಸ ಉಮಾಪುರೆ ನಿರೂಪಣೆ ಮಾಡಿದರು.

ಖಿನ್ನತೆ ಜಗತ್ತನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ಖಿನ್ನತೆಯಿಂದ ಆತ್ಮಹತ್ಯೆಗಳು ಸಂಭವಿಸುತ್ತಿವೆ. ಭಾರತದಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ಜನ ಆತ್ಮಹತ್ಯೆಯಿಂದ ಸಾಯುತ್ತಿದ್ದಾರೆ. ಬದುಕನ್ನು ಪ್ರೀತಿಸುವ, ಉತ್ತಮ ಕೆಲಸಗಳನ್ನು ಗೌರವಿಸುವ ಗುಣ ಬೆಳೆಸಿಕೊಂಡು ಖಿನ್ನತೆಯಿಂದ ಮುಕ್ತವಾಗಬಹುದು.
| ಸಂದೀಪ ಬಿ.ಎಚ್. ಮನೋವಿಜ್ಞಾನಿ