ಜಿಲ್ಲೆ

ಸೇವಾ ಮನೋಭಾವದ ಕೆಲಸದಿಂದ ಸಂತೃಪ್ತಿ...

ಬಸ್ರೂರು ರಾಜೀವ ಶೆಟ್ಟಿ ಅಭಿಪ್ರಾಯ

ಎನ್​ಎಸ್​ಎಸ್​ ಶಿಬಿರ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಉದಾತ್ತ ಸೇವಾ ಮನೋಭಾವದಿಂದ ಕೈಗೊಳ್ಳುವ ಯಾವುದೇ ಕೆಲಸ ಮನಸ್ಸಿಗೆ ಸಂತೋಷ, ಸಂತೃಪ್ತಿ ನೀಡುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯು ಅಂತಹ ಸೇವಾ ಅವಕಾಶವನ್ನು ಸಮುದಾಯಕ್ಕೆ ನೀಡಲು ವಿದ್ಯಾರ್ಥಿಗಳಿಗೆ ಒಳ್ಳೆಯ ವೇದಿಕೆ ಒದಗಿಸುತ್ತದೆ. ಇದೊಂದು ಉತ್ತಮ ಅವಕಾಶವಾಗಿದ್ದು, ವಿದ್ಯಾರ್ಥಿ ಜೀವನದಲ್ಲಿಯೇ ಸಫಲತೆ ಪಡೆಯಬಹುದು ಎಂದು ರೆಡ್​ಕ್ರಾಸ್​ ಸಂಸ್ಥೆಯ ಉಡುಪಿಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಅಭಿಪ್ರಾಯಪಟ್ಟರು.

ಉಡುಪಿ ಕಡೆಕಾರಿನಲ್ಲಿರುವ ಬಿಲ್ಲವ ಸೇವಾ ಸಂಘ ಮತ್ತು ನಾರಾಯಣಗುರು ಸಮುದಾಯ ಭವನದಲ್ಲಿ ಅಜ್ಜರಕಾಡಿನ ಡಾ. ಜಿ.ಶಂಕರ್​ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಧರಪ್ರಸಾದ್​ ಕೆ. ಅಧ್ಯಕ್ಷತೆ ವಹಿಸಿದ್ದರು. ಸಾಫಲ್ಯ ಟ್ರಸ್ಟ್​ನ ನಿರ್ದೇಶಕಿ ನಿರುಪಮಾ ಪ್ರಸಾದ್​, ಬಿಲ್ಲವ ಸೇವಾ ಸಂಘ ಕಡೆಕಾರು ಅಧ್ಯಕ್ಷ ಶಂಕರ್​ ಜಿ. ಸುವರ್ಣ, ಯುವಕ ಮಂಡಲ ಕಡೆಕಾರ್​ನ ಅಧ್ಯಕ್ಷ ದೀಪಕ್​ ಪುತ್ರನ್​, ಗ್ರಾಪಂ ಮಾಜಿ ಸದಸ್ಯ ತಾರಾನಾಥ್​ ಆರ್​. ಸುವರ್ಣ, ಚೈತನ್ಯ ಫೌಂಡೇಷನ್​ನ ಅಧ್ಯಕ್ಷ ಸುನೀಲ್​ ಸಾಲಿಯಾನ್​, ಕಾಲೇಜಿನ ವಿಜ್ಞಾನ ನಿಕಾಯದ ಡೀನ್​ ಪ್ರೊ. ಶ್ರೀಮತಿ ಅಡಿಗ ಉಪಸ್ಥಿತರಿದ್ದರು.

ಕಾಲೇಜಿನ ಎನ್​ಎಸ್​ಎಸ್​ ಯೋಜನೆಯ ಶಿಬಿರಾಧಿಕಾರಿ ಪ್ರೊ. ನಿಕೇತನಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಸಮೃದ್ಧಿ ಕಾರ್ಯಕ್ರಮ ನಿರೂಪಿಸಿದರು. ಎನ್​ಎಸ್​ಎಸ್​ ಯೋಜನಾಧಿಕಾರಿ ವಿದ್ಯಾ ಡಿ. ವಂದಿಸಿದರು.

ಇಂದು ಬಿಡುವಿಲ್ಲದ ಜೀವನ ಪದ್ಧತಿಯಲ್ಲಿ ಹೆಚ್ಚಿನ ಜನರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಕ್ರೀಡೆ, ಕಲೆ, ಸಾಂಸ್ಕೃತಿಕ ಚಟುವಟಿಕೆ ಮತ್ತು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ಮಾನಸಿಕ ಒತ್ತಡಗಳಿಂದ ಪಾರಾಗಬಹುದು. | ಪೂರ್ಣಿಮಾ. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ