ವಿಜಯವಾಣಿ ಸುದ್ದಿಜಾಲ ಧಾರವಾಡ
ಜನತಾ ಶಿಕ್ಷಣ ಸಮಿತಿ ತನ್ನ ವಿವಿಧ ಅಂಗ ಸಂಸ್ಥೆಗಳ ಮೂಲಕ ಅನೇಕ ರೀತಿಯ ಕೋರ್ಸ್‌ಗಳ ಶಿಕ್ಷಣ ನೀಡುತ್ತಿದ್ದು, ಇದೀಗ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಬಿಎ ಮಾಸ್ ಕಮ್ಯುನಿಕೇಷನ್ ಮತ್ತು ಪತ್ರಿಕೋದ್ಯಮ ಪದವಿ ಕೋರ್ಸ್ ಪ್ರಾರಂಭಿಸಲಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಅಗತ್ಯವಿರುವ ಕೋರ್ಸ್‌ಗಳಿಗೆ ಪ್ರಾಧಾನ್ಯತೆ ನೀಡುತ್ತಿರುವುದು ಸಂಸ್ಥೆ ವಿಶೇಷತೆ ಎಂದು ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ವಿದ್ಯಾಗಿರಿಯ ಜೆಎಸ್‌ಎಸ್ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಿಎ ಪದವಿ ಕೋರ್ಸ್ ಆರಂಭ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಅನಾವರಣ ಮಾಡಬೇಕಾದದ್ದು ಶಿಕ್ಷಕರ ಕರ್ತವ್ಯ. ಅದಕ್ಕೆ ಪೂರಕವಾಗಿ ಶೈಕ್ಷಣಿಕ ವಾತಾವರಣ ಇರಬೇಕು. ವಿದ್ಯಾರ್ಥಿಗಳಿಗೆ ಕಲಿಕೆ ಉತ್ಸಾಹ, ಹಸಿವು ಇರಬೇಕು ಎಂದರು.
ಪ್ರದೀಪ್ ಆಚಾರ್ಯ ವ್ಯಕ್ತಿತ್ವ ವಿಕಸನ, ನೆನಪಿನ ಶಕ್ತಿಯ ವೃದ್ಧಿ, ಭಾಷಾ ಕೌಶಲದ ವಿಷಯವಾಗಿ ನೂತನವಾಗಿ ಪ್ರವೇಶ ಪಡೆದ ಪದವಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಪದವಿ ಪ್ರವೇಶ ಪಡೆದ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾಲೇಜಿನ ಉಪಪ್ರಾಚಾರ್ಯ ಡಾ.ಸೂರಜ್ ಜೈನ್, ಜೆಎಸ್‌ಎಸ್ ಗುಬ್ಬಿ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಎಚ್ ನಾಗಚಂದ್ರ, ಡಾ.ಆರ್.ವಿ. ಚಿಟಗುಪ್ಪಿ, ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಎನ್.ಎಲ್. ಪುಡಕಲಕಟ್ಟಿ, ಗೀತಾ ರೂಗಿ, ಇತರರು ಇದ್ದರು. ಮಹಾಂತ ದೇಸಾಯಿ ವಂದಿಸಿದರು.