ನರಗುಂದ: ಮುಧೋಳದಿಂದ 18 ವರ್ಷಗಳ ಹಿಂದೆ ಪ್ರಾರಂಭಿಸಲಾದ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ (ಎಂಆರ್‌ಎನ್)ದ 66ನೇ ಶಾಖೆ ನರಗುಂದ ಪಟ್ಟಣದಲ್ಲಿ ಫೆ.1ರಂದು ಉದ್ಘಾಟನೆಗೊಳ್ಳಲಿದೆ ಎಂದು ಬ್ಯಾಂಕ್‌ನ ಎಚ್.ಆರ್ ವಿಭಾಗದ ವ್ಯವಸ್ಥಾಪಕ ಆನಂದ ಕುಲಕರ್ಣಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಆರ್‌ಎನ್ ಸಹಕಾರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮುರುಗೇಶ ನಿರಾಣಿ ಅವರ ಮಾರ್ಗದರ್ಶನದಲ್ಲಿ ಬ್ಯಾಂಕ್ ಯಶಸ್ಸಿನತ್ತ ದಾಪುಗಾಲಿಟ್ಟಿದೆ ಎಂದರು.
400 ಸದಸ್ಯರಿಂದ 10 ಲಕ್ಷ ರೂ. ಬಂಡವಾಳದಿಂದ ಪ್ರಾರಂಭಗೊಂಡು ಪ್ರಸ್ತುತ 2 ಲಕ್ಷಕ್ಕೂ ಅಧಿಕ ಸದಸ್ಯರು ಹಾಗೂ 10.60 ಕೋಟಿ ರೂ. ಷೇರು ಬಂಡವಾಳ ಹೊಂದಿದೆ. 45 ಸಾವಿರ ಕೋಟಿ ರೂ. ವ್ಯವಹಾರ, 2200 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ. ಸದಸ್ಯರಿಗೆ 1800 ಕೋಟಿ ರೂ. ಸಾಲ ವಿತರಿಸಿದ್ದು, 400 ಕೋಟಿ ರೂ.ಗಳನ್ನು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಠೇವಣಿ ಇರಿಸಿದೆ. ಪ್ರತಿ ವರ್ಷವೂ ಸದಸ್ಯರಿಗೆ ಶೇ.25ರಷ್ಟು ಲಾಭಾಂಶ ಹಂಚಿಕೆ ಮಾಡಲಾಗಿದೆ ಎಂದರು.
ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಜರುಗುವ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಭೈರನಹಟ್ಟಿ ಶಾಂತಲಿಂಗ ಶ್ರೀಗಳು ವಹಿಸುವರು. ಶಾಸಕ ಸಿ.ಸಿ. ಪಾಟೀಲ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ, ವಿಜಯ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಮುರುಗೇಶ ನಿರಾಣಿ, ಸಹಕಾರ ಗ್ರಾಹಕರ ಮಹಾ ಮಂಡಳದ ಅಧ್ಯಕ್ಷ ಜಿ.ಪಿ. ಪಾಟೀಲ, ಕಾರ್ಯಕ್ರಮ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಜ್ಯೋತಿ ಬೆಳಗಿಸುವರು. ಬ್ಯಾಂಕ್‌ನ ಮುಖ್ಯ ಜನರಲ್ ಮ್ಯಾನೇಜರ್ ಎಂ.ಎಚ್. ಪತ್ತೆನ್ನವರ, ನರಗುಂದ ಶಾಖೆ ಸಲಹಾ ಸಮಿತಿ ಸದಸ್ಯ ವಸಂತ ಜೋಗಣ್ಣವರ, ಡಿಜಿಎಂ ವಿರೂಪಾಕ್ಷ ಪಲ್ಲಾಪುರ ಮಾತನಾಡಿದರು. ಸಲಹಾ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಮಲ್ಲನಗೌಡ ತಿಮ್ಮನಗೌಡ್ರ, ಮಂಜುನಾಥ ಆನೆಗುಂದಿ, ಅಶೋಕ ಜ್ಞಾನೋಪಂಥ, ಅಶೋಕ ಪತ್ರಿ, ಪ್ರವೀಣ ಬ್ಯಾಹಟ್ಟಿ, ಸುನಿಲ ಶೆಲ್ಲಿಕೇರಿ, ಸಂಜೀವ ಜಾಧವ ಹಾಗೂ ಬ್ಯಾಂಕ್ ವ್ಯವಸ್ಥಾಪಕ ಆನಂದ ಸಣ್ಣಕ್ಕಿ ಸುದ್ದಿಗೋಷ್ಠಿಯಲ್ಲಿದ್ದರು.