ವಿಜಯವಾಣಿ ಸುದ್ದಿಜಾಲ ಉಡುಪಿ
ಪ್ರತಿಗಾಮಿ, ಜನವಿರೋಧಿ ಚಿಂತನೆ ಬದಲಾಯಿಸಲು ರಂಗಭೂಮಿ ಪೂರಕವಾಗಿದೆ. ಬರಡು ನೆಲದಲ್ಲಿ ಜಾಗತೀಕರಣ, ಮುಕ್ತ ಮಾರುಕಟ್ಟೆಯ ಯುಗದಲ್ಲಿ ಮಾಲಿನ್ಯಗೊಂಡ ಮನಸ್ಸುಗಳನ್ನು ಶುದ್ಧಗೊಳಿಸಲು ನಾಟಕಗಳು ಪ್ರಮುಖ ಸಾಧನವಾಗಿದೆ. ಸಮಾಜ ಜಾಗೃತಗೊಳಿಸುವಲ್ಲಿ ಹಾಗೂ ಕೋಮು, ಜಾತಿ, ಮತೀಯ ಸಂಘರ್ಷದಿಂದಾಗಿ ಗಾಯಗೊಂಡ ಈ ನೆಲಕ್ಕೆ ರಂಗಭೂಮಿ ಮದ್ದಾಗಬಲ್ಲದು ಎಂದು ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಕಾಲೇಜು ಮುದ್ದಣ ಮಂಟಪದಲ್ಲಿ ರಥಬೀದಿ ಗೆಳೆಯರು (ಸಾಂಸ್ಕೃತಿಕ ಸಂಘಟನೆ) ವತಿಯಿಂದ ಡಾ. ನಿ.ಮುರಾರಿ ಬಲ್ಲಾಳ್, ಪ್ರೊ. ಕೆ.ಎಸ್. ಕೆದಿಲಾಯ ಸ್ಮರಣಾರ್ಥ ಫೆ.15ರಂದು ಸಂಜೆ ಆಯೋಜಿಸಿದ್ದ ಮೂರು ದಿನಗಳ ಮುರಾರಿ ಕೆದಿಲಾಯ ರಂಗೋತ್ಸವ' ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ರಂಗ ಶಿಕ್ಷಣ ನೀಡಿದರೆ ಮಕ್ಕಳು ಬಾಲ್ಯದಿಂದಲೇ ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಪ್ರೇಕ್ಷಕರಾಗಿ ರೂಪುಗೊಳ್ಳಲು ಸಾಧ್ಯ. ಉಡುಪಿ ಜಿಲ್ಲೆ ಅಭಿವೃದ್ಧಿಗೂ ಸಹ ರಂಗ ಚಿಂತನೆ ಪೂರಕವಾಗಿದೆ ಎಂದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಮಾತನಾಡಿದರು. ರಥಬೀದಿ ಗೆಳೆಯರು ಸಂಸ್ಥೆಯ ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ, ಎನ್.ಮುರಾರಿ ಬಲ್ಲಾಳ್ ಚಿಂತನ ಪ್ರತಿಷ್ಠಾನದ ಅಧ್ಯಕ್ಷ ಸಂತೋಷ್ ಬಲ್ಲಾಳ್ ಉಪಸ್ಥಿತರಿದ್ದರು.
ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಉದ್ಯಾವರ ನಾಗೇಶಕುಮಾರ್ ಸ್ವಾಗತಿಸಿದರು. ಸಂತೋಷ್ ಶೆಟ್ಟಿ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು.