ಮಡಿಕೇರಿ: ಗುತ್ತಿಗೆದಾರರು ಕೈಗೆತ್ತಿಕೊಂಡ ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಮುಗಿಸದಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಎಚ್ಚರಿಕೆ ನೀಡಿದರು.
ಸಿದ್ದಾಪುರದ ಮುಲ್ಲೆತೋಡುವಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣಗೊಂಡಿರುವ ಸೇತುವೆಯನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
2.30 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗಿದೆ. ಕೆಲ ತಿಂಗಳ ಹಿಂದೆ ಈ ಸೇತುವೆ ಕಾಮಗಾರಿ ಸ್ಥಗಿತವಾಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿತ್ತು. ಕಾಮಗಾರಿಗೆ ಅಡ್ಡಿಯಾಗಿದ್ದ ರಸ್ತೆ ಬದಿಯಲಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿತ್ತು. ಅದರಂತೆಯೇ ಕಾಮಗಾರಿ ಮುಗಿದು ಉದ್ಘಾಟನೆಗೊಳ್ಳುತ್ತಿದೆ ಎಂದರು.
ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ಕೈಗೆತ್ತಿಕೊಂಡ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸದಿದ್ದಲ್ಲಿ ಅಂತಹವರ ಗುತ್ತಿಗೆಯನ್ನು ರದ್ದುಪಡಿಸಲಾಗುವುದು. ಸಾರ್ವಜನಿಕರ ಹಣ ಪೋಲಾಗದ ರೀತಿ ಇಂಜಿನಿಯರ್ ಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.
ಕೆಪಿಸಿಸಿ ಕಾನೂನು ಘಟಕದ ಉಪಾಧ್ಯಕ್ಷ ಎಂ.ಎಸ್. ವೆಂಕಟೇಶ್, ವಲಯಾಧ್ಯಕ್ಷ ಪ್ರತೀಶ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಳನಿ ಸ್ವಾಮಿ, ಟಿ.ಎಚ್.ಮಂಜುನಾಥ್, ಪಂಚಾಯಿತಿ ಸದಸ್ಯರಾದ ದೇವಜಾನು, ಸಮೀರ, ಪ್ರೇಮ, ಶುಕೂರ್, ಅಭಿತ ಸೇರಿದಂತೆ ಕಾಂಗ್ರೇಸ್ ಕಾರ್ಯಕರ್ತರು ಸಾರ್ವಜನಿಕರು ಇದ್ದರು.ನದಿ ತೀರದ ಸಂತ್ರಸ್ತರ ನಿವೇಶನದ ನಕ್ಷೆ ಸಿದ್ಧಗೊಂಡಿದ್ದು ಶೀಘ್ರವೇ ಹಸ್ತಾಂತರ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ. ಸಂತ್ರಸ್ತರು ನದಿ ತೀರ ಬಿಟ್ಟು ಬೇರೆಡೆಗೆ ಹೋಗಲು ತಯಾರಾಗಬೇಕು ಎಂದು ಶಾಸಕ ಎ.ಎಸ್ ಪೊನ್ನಣ್ಣನ ಮನವಿ ಮಾಡಿದರು.
ಕಸವಿಲೇವಾರಿ ಘಟಕಕ್ಕೆ ಖಾಸಗಿ ಜಾಗವನ್ನು ನೀಡಲು ಮುಂದಾಗಿದ್ದು ಕಸವನ್ನು ಸಾರ್ವಜನಿಕರು ಸಂಸ್ಕರಿಸಿ ಪಂಚಾಯಿತಿ ವಾಹನಕ್ಕೆ ನೀಡಿದಲ್ಲಿ ಹೆಚ್ಚು ಸಹಕಾರಿಯಾಗಲಿದೆ ಎಂದರು.