ಜಿಲ್ಲೆ

ಓದುಗರ ಆಕರ್ಷಿಸುವುದು ಬರಹಗಾರರ ಕರ್ತವ್ಯ: ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ಸಾಮಾನ್ಯರ ಬದುಕು, ಅವರು ಎದುರಿಸುತ್ತಿರುವ ಸಂಕಷ್ಟಗಳು, ತಾನಿರುವ ಪ್ರದೇಶ, ಭಾಷೆ, ನಾಡು, ರಾಷ್ಟ್ರವನ್ನು ಕಟ್ಟಿಕೊಡುವುದು ಕವಿಗಳು, ಸಾಹಿತಿಗಳು, ಲೇಖಕರಾದವರ ಕರ್ತವ್ಯ ಎಂದು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.

ನಗರದ ವಿವೇಕಾನಂದ ರಂಗಮಂದಿರದಲ್ಲಿ ಆಯೋಜಿಸಿದ್ದ ಎಂ.ಆರ್.ಎಂ.ಪ್ರಕಾಶನದ ಉದ್ಘಾಟನೆ, ಮೂರು ಕೃತಿಗಳ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾನ್ಯ ಜನರಿಗೆ ಕೇಳಿಸದ, ಅವರ ಅರಿವಿಗೆ ಬಾರದ ಅನೇಕ ಸಂಗತಿಗಳು ನಿಮಗೆ ಗೊತ್ತಾಗಬೇಕು. ಅದನ್ನು ಸಾಹಿತ್ಯ ರೂಪದಲ್ಲಿ ಹೊರತಂದಾಗ ವಿಶೇಷವಾಗಿ ಓದುಗರನ್ನು ಆಕರ್ಷಿಸಲು ಸಾಧ್ಯ ಎಂದು ತಿಳಿಸಿದರು.

ಲೇಖಕನಿಗೆ ಮಾತು ಎನ್ನುವುದು ಮಾಧ್ಯಮವಿದ್ದಂತೆ. ಪ್ರಾಮಾಣಿಕತೆ, ಬದ್ಧತೆ, ಪ್ರೀತಿಯಿಂದ ಮಾತುಗಳ ಮೇಲಿನ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಿಕೊಳ್ಳಬೇಕು. ಭಾಷೆಯ ಮೂಲಕ ಯಾರನ್ನು ಬೇಕಾದರೂ ಸುಲಭವಾಗಿ ಆಕರ್ಷಿಸಬಹುದು. ಭಾಷೆಗೆ ಅಂತಹ ಶಕ್ತಿ ಇದೆ. ನಮ್ಮ ನಡತೆ ಮತ್ತು ವ್ಯಕ್ತಿತ್ವದಿಂದ ಮಾತಿನ ಚಾಟಿ ಬೀಸಬೇಕು. ಮಾತನಾಡುವಾಗ ನಮ್ಮ ಜವಾಬ್ದಾರಿಗಳು, ಹೊಣೆಗಾರಿಕೆ ಹೆಚ್ಚಾಗುತ್ತಿರುತ್ತವೆ ಎನ್ನುವುದರ ಅರಿವಿರಬೇಕು. ಒಮ್ಮೆ ಮಾತನ್ನು ಕೆಡಿಸಿಕೊಂಡರೆ ಅದರ ಮೇಲಿನ ಹೊಣೆಗಾರಿಕೆಯನ್ನು ಮತ್ತೆ ಸಂಪಾದಿಸಿಕೊಳ್ಳುವುದು ತುಂಬಾ ಕಷ್ಟ.

ಕಥೆಗಾರನಾದವನು ಕಥೆಯನ್ನು ಹೇಳುತ್ತಾ ಹೇಳುತ್ತಾ ಅದನ್ನು ಉಳಿಸಿಕೊಂಡು ಹೋಗುವ ಮನಸ್ಥಿತಿಯನ್ನೂ ಹೊಂದಿರಬೇಕು. ಕಥೆ ಹೇಳುವಾಗ ಕೇಳುವವರ ಮನಃಪರಿವರ್ತನೆ ಮಾಡುವುದರ ಜತೆಯಲ್ಲೇ ನಿಮ್ಮ ಅಸ್ತಿತ್ವವನ್ನೂ ಉಳಿಸಿಕೊಳ್ಳಬೇಕು. ನಾಳೆಯೂ ಕಥೆಯನ್ನು ಹೇಳುವ ಮನಸ್ಥಿತಿಯನ್ನು ಇಟ್ಟುಕೊಂಡಿರಬೇಕು. ಅದೇ ರೀತಿ ಕವಿಗಳು, ಸಾಹಿತಿಗಳೂ ಕೂಡ ಬರವಣಿಗೆಯನ್ನು ನಿರಂತರವಾಗಿ ಉಳಿಸಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು ಎಂದು ಹೇಳಿದರು.

ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ, ಪುಸ್ತಕ ಸಂಸ್ಕೃತಿ ಇಂದು ಅಧೋಗತಿಗೆ ಇಳಿದಿದೆ. ಸರ್ಕಾರಗಳು ಪುಸ್ತಕ ಸಂಸ್ಕೃತಿಯ ಕತ್ತನ್ನು ಹಿಸುಕುತ್ತಿದ್ದಾರೆ. ಗ್ರಂಥಾಲಯಗಳು ಪುಸ್ತಕಗಳನ್ನು ಖರೀದಿ ಮಾಡುತ್ತಿಲ್ಲ. ಹಲವು ವರ್ಷಗಳ ಹಿಂದೆ ಖರೀದಿ ಮಾಡಿದ ಪುಸ್ತಕಗಳಿಗೆ ಇನ್ನೂ ಹಣ ಬಿಡುಗಡೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪುಸ್ತಕ ಸಂಸ್ಕೃತಿಯನ್ನು ಕೊಲ್ಲುವ ಮೂಲಕ ಸರ್ಕಾರಗಳು, ಜನರು ಆಲೋಚನೆ ಮಾಡುವ, ಪ್ರಶ್ನಿಸುವ ಮನೋಭಾವ ದೂರ ಮಾಡುತ್ತಿವೆ. ಯಾರೂ ಮಾತನಾಡಲು ಸಾಧ್ಯವಾಗದಂತಹ ವಾತಾವರಣ ನಿರ್ಮಿಸಿ ನಿಷ್ಕ್ರಿಯ ಸಮಾಜವನ್ನು ಸೃಷ್ಟಿ ಮಾಡುತ್ತಿದೆ. ಜಾಗತೀಕರಣ ರೈತರನ್ನು ಬಲಿಪಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪುಸ್ತಕ ಸಂಸ್ಕೃತಿಯನ್ನು ಉಳಿಸುವ ಕೆಲಸ ಹೆಚ್ಚಾಗಿ ನಡೆಯಬೇಕು. ರೈತರ ಆಶೋತ್ತರಗಳಿಗೆ ಸ್ಪಂದಿಸಿದರೆ ಸಾಹಿತ್ಯ ಉಳಿಯಲು ಸಾಧ್ಯವಾಗುತ್ತದೆ. ಸರ್ಕಾರಗಳೂ ಕೂಡ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಗ್ರಂಥಾಲಯಗಳಿಗೆ ಪ್ರತಿ ವರ್ಷ 300 ಪುಸ್ತಕಗಳನ್ನು ಖರೀದಿಸುವಂತಹ ವ್ಯವಸ್ಥೆ ಜಾರಿಗೊಳಿಸುವಂತೆ ಮನವಿ ಮಾಡಿದರು.

ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಎಂಆರ್‌ಎಂ ಪ್ರಕಾಶಕರಾದ ಮಂಜು ಮುತ್ತೇಗೆರೆ, ದ.ಕೋ.ಹಳ್ಳಿ ಚಂದ್ರಶೇಖರ ಇದ್ದರು.

ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ, ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ.ಇ.ಚನ್ನಬಸವಣ್ಣ ಹಾಗೂ ಮದ್ದೂರು ತಾಲೂಕು ಮಾದರಹಳ್ಳಿಯ ಸಾವಯವ ಕೃಷಿಕ ಮಾದರಹಳ್ಳಿ ಈರೇಗೌಡ ಅವರ ಸಾಧನೆ ಮತ್ತು ಸಾಮಾಜಿಕ ಕೊಡುಗೆ ಪರಿಗಣಿಸಿ ಅಭಿನಂದಿಸಲಾಯಿತು. ಕವಿ ಹಾಗೂ ಶಿಕ್ಷಕ ಕೊತ್ತತ್ತಿ ರಾಜು ಅವರ ಒಗೆವ ಕಲ್ಲು ಶಿವಲಿಂಗ, ಕವನಸಂಕಲನ, ಕನ್ನಡ ಉಪನ್ಯಾಸಕ ಲೋಕೇಶ್ ಬೆಕ್ಕಳೆಲೆ ಅವರ ಸಾಹಿತ್ಯ, ಚಾರಣ, ಶಿಕ್ಷಣದ ಕುರಿತಾದ ಲೇಖನಗಳ ಸಿದ್ಧಾಂತದಾಚೆಗೆ ಕೃತಿ ಹಾಗೂ ಚಂದ್ರಶೇಖರ ದ.ಕೋ.ಹಳ್ಳಿ ಅವರ ಅಂಕಣ ಬರಹ ಹಾಗೂ ವಿಶೇಷ ಲೇಖನಗಳನ್ನು ಒಳಗೊಂಡ ಮುಕ್ತ ಮತ್ತು ಸ್ವಾತಂತ್ರೃ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.