ಜಿಲ್ಲೆ

ಗಣಿತ ಪ್ರಯೋಗಾಲಯದ ಸದುಪಯೋಗ ಅಗತ್ಯ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಡ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುವುದು ತಾಯಿ ಭಾಗೀರಥಿಬಾಯಿ ಅವರ ಆಶಯವಾಗಿತ್ತು. ಅದರಂತೆ ವನಿತಾ ಸೇವಾ ಸಮಾಜದ ಆಡಳಿತ ಮಂಡಳಿಯು ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಇಲ್ಲಿ ಸ್ಥಾಪಿತವಾಗಿರುವ ಕ್ರಿಯಾತ್ಮಕ ಗಣಿತ ಪ್ರಯೋಗಾಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ವನಿತಾ ಸೇವಾ ಸಮಾಜದ ಪ್ರೌಢಶಾಲೆಯಲ್ಲಿ ಸ್ಥಾಪಿತ ದರಗಾದ ಕ್ರಿಯಾತ್ಮಕ ಗಣಿತ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಈಶ್ವರ ನಾಯಕ ಮಾತನಾಡಿ, ಜೀವನದ ಲೆಕ್ಕ ಚೊಕ್ಕವಾಗಿದ್ದರೆ ಜೀವನ ಉತ್ತಮವಾಗಿರುತ್ತದೆ. ಮಾಡಿ ಕಲಿ, ನೋಡಿ ಕಲಿ ತತ್ವದಿಂದ ಮಕ್ಕಳಲ್ಲಿ ಗಣಿತದ ಆಸಕ್ತಿ ಹೆಚ್ಚುತ್ತದೆ ಎಂದರು.
ಕರ್ನಾಟಕದ ವಿಶ್ವಾವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥರಾದ ಪ್ರೊ. ಎಸ್.ಸಿ. ಶಿರಾಳಶೆಟ್ಟಿ ಮಾತನಾಡಿ, ಮಕ್ಕಳು ಕಷ್ಟ ಪಟ್ಟು ಕಲಿಯುವುದಕ್ಕಿಂತ ಇಷ್ಟ ಪಟ್ಟು ಕಲಿಯಬೇಕು. ಇಷ್ಟದ ಕಲಿಕೆಯಿಂದ ಗಣಿತ ಸುಲಭವಾಗಿ ಮನದಟ್ಟಾಗುತ್ತದೆ. ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದರು.
ಪ್ರಾದೇಶಿಕ ವಿಜ್ಞಾನ ಕೇಂದ್ರದ ಮುಖ್ಯಸ್ಥ ವೀರಣ್ಣ ಬೋಳಿಶೆಟ್ಟಿ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಸುನೀಲ ಬಾಗೇವಾಡಿ ಮಾತನಾಡಿದರು. ದರಗಾದ ಸೆಕ್ಯುರಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್.ಎಂ. ದರಗಾದ, ವನಿತಾ ಸೇವಾ ಸಮಾಜದ ಅಧ್ಯಕ್ಷ ಟಿ.ಎಲ್. ಪಾಟೀಲ, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳಿದ್ದರು.