ಬೆಳಗಾವಿ: ಬಡವರಿಗೆ ಹತ್ತಿರವಾಗಿ ಗ್ರಾಮೀಣ ಜನತೆಗೆ ಉತ್ತಮ ವೈದ್ಯಕೀಯ ಸೌಲಭ್ಯ, ಔಷಧೋಪಚಾರ ಕಲ್ಪಿಸುವಲ್ಲಿ ಕೆಎಲ್‌ಇ ಆರೋಗ್ಯ ಸೇವೆಗಳು ಮುಂಚೂಣಿಯಲ್ಲಿವೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಕರ್ನಾಟಕ ಗಡಿಯಲ್ಲಿರುವ ಮಹಾರಾಷ್ಟ್ರದ ಚಂದಗಡ ಪಾಟಣೆ ಫಾಟಾದಲ್ಲಿ ಕೆಎಲ್‌ಇ ವೆಲ್‌ನೆಸ್ ಆಸ್ಪತ್ರೆಯನ್ನು ಜನಸೇವೆಗೆ ಅರ್ಪಿಸಿ ಅವರು ಮಾತನಾಡಿದರು. ದೇಶದಲ್ಲಿ ಕೆಎಲ್‌ಇ ಸಂಸ್ಥೆಯು ಆರೋಗ್ಯ ಕ್ರಾಂತಿಯನ್ನೇ ಮಾಡಿದೆ. ಶಿಕ್ಷಣದೊಂದಿಗೆ ಆರೋಗ್ಯ ಕ್ಷೇತ್ರಕ್ಕೆ ಬಹುಮೌಲಿಕ ಕೊಡುಗೆ ನೀಡಿದೆ. ವೆಲ್‌ನೆಸ್ ಆಸ್ಪತ್ರೆಗಳ ಪರಿಕಲ್ಪನೆಗಳ ಮೂಲಕ ಬೆಳಗಾವಿ ನಗರದ ಸುತ್ತಲಿನ ಬಡವರಿಗೆ ಹಾಗೂ ಕಾರ್ಮಿಕ ಸಮುದಾಯದವರಿಗೆ ಆರೋಗ್ಯ ಸೇವೆಗಳನ್ನು ನೀಡುತ್ತಿದೆ. ಈಗ ಮಹಾರಾಷ್ಟ್ರದ ಚಂದಗಡದಲ್ಲಿ ಕೆಎಲ್‌ಇ ವೆಲ್‌ನೆಸ್ ಸೆಂಟರ್ ಸ್ಥಾಪಿಸುವ ಮೂಲಕ ತನ್ನ ಆರೋಗ್ಯ ಸೇವೆ ವಿಸ್ತರಿಸಿದೆ ಮಾತ್ರವಲ್ಲ ಈ ಭಾಗದ ಜನತೆಗೆ ಹತ್ತಿರವಾಗಿದೆ ಎಂದರು.
ಕಾಹೆರ್ ಉಪಕುಲಪತಿ ಡಾ. ನಿತಿನ ಗಂಗಾಣೆ ಮಾತನಾಡಿ, ಕಳೆದ 6 ತಿಂಗಳಲ್ಲಿ ವೆಲ್‌ನೆಲ್ ಕಲ್ಪನೆ ಚಿಗುರೊಡೆದು ಈಗ ಆಸ್ಪತ್ರೆ ರೂಪಗೊಂಡು ಜನಸೇವೆಗೆ ಅರ್ಪಣೆಯಾಗಿದೆ. ಇದು ಪ್ರಾರಂಭ. ಶೀಘ್ರದಲ್ಲೇ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಗೊಳ್ಳಲಿದೆ. ಮಹಾತ್ಮಾ ಜ್ಯೋತಿಬಾ ಫುಲೆ ಯೋಜನೆ ಕರ್ನಾಟಕದ ಕೆಎಲ್‌ಇ ಆಸ್ಪತ್ರೆಯಲ್ಲಿ ಮಾತ್ರವಿದೆ. ಉಚಿತವಾಗಿ ಹೆರಿಗೆ ಮಾಡಲಾಗುವುದು. ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಗ್ರಾಪಂ ಸದಸ್ಯ ಗೋಪಾಲರಾವ್ ಪಾಟೀಲ ಮಾತನಾಡಿ, ಗಡಿಭಾಗದಲ್ಲಿರುವ ಕಾರಣ ಸರ್ಕಾರದ ಯಾವುದೇ ಸೇವೆ ಲಭಿಸಬೇಕಾದರೂ ಕೂಡ ನಾವು ಹೋರಾಟ ಮಾಡಬೇಕಾಗಿದೆ. ಆದರೆ, ಯೋಜನೆಗಳು ಇಲ್ಲಿಗೆ ಬಂದು ಮುಟ್ಟಲು ಬಹಳ ತಡವಾಗುತ್ತಿವೆ. ಆದ್ದರಿಂದ ಕರ್ನಾಟಕ ಹಾಗೂ ಕೆಎಲ್‌ಇ ಸಂಸ್ಥೆಯು ಚಂದಗಡ ತಾಲೂಕನ್ನು ಆರೋಗ್ಯ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಗೊಳಿಸಲು ಕ್ರಮ ಕೈಕೊಳ್ಳಬೇಕು. ಕರೊನಾ ವೇಳೆಯಲ್ಲಿ ಕೊಲ್ಲಾಪೂರ ಜಿಲ್ಲಾಧಿಕಾರಿ ಅವರನ್ನು ಮೇಲಿಂದ ಮೇಲೆ ಸಂಪರ್ಕಿಸಿದರೂ ಕೂಡ ಅಗತ್ಯ ಸೇವೆ ನಮಗೆ ಲಭಿಸಲಿಲ್ಲ. ಕೊನೆಗೆ ಬೆಳಗಾವಿ ಆಸ್ಪತ್ರೆಗೆ ಅಲೆದಾಡಬೇಕಾಯಿತು. ಈಗ ಕೆಎಲ್‌ಇ ವೆಲ್‌ನೆಸ್ ಆಸ್ಪತ್ರೆ ಇಲ್ಲಿ ಪ್ರಾರಂಭಿಸಿರುವುದು ಈ ಭಾಗದ ಜನತೆಗೆ ಅನುಕೂಲವಾಗಿದೆ ಎಂದರು.
ಕೆಎಲ್‌ಇ ಆಸ್ಪತ್ರೆಗಳ ಸಂಯೋಜಕ ಡಾ. ವಿ.ಡಿ. ಪಾಟೀಲ ಮಾತನಾಡಿ, ಮುಂಬರುವ ದಿನಗಳಲ್ಲಿ ಈ ಭಾಗದಲ್ಲಿ 5 ಎಕರೆ ವಿಸ್ತೀರ್ಣದಲ್ಲಿ ಆಸ್ಪತ್ರೆ ನಿರ್ಮಿಸಲಾಗುವುದು. ಕೇವಲ 3 ವರ್ಷದಲ್ಲಿ ತಲೆ ಎತ್ತಲಿದೆ ಎಂದರು.
ಡಾ. ಎನ್.ಎಸ್. ಮಹಾಂತಶೆಟ್ಟಿ, ಡಾ. ವಿ.ಡಿ. ಪಾಟೀಲ, ಕೆಎಲ್‌ಇ ನಿರ್ದೇಶಕ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಅಮರ ಬಾಗೇವಾಡಿ, ಡಾ. ವಿ ಎಸ್ ಸಾಧುನವರ, ಡಾ. (ಕರ್ನಲ್) ಎಂ. ದಯಾನಂದ, ಡಾ. ಎಂ.ಎಸ್. ಗಣಾಚಾರಿ, ಗೋಪಾಲರಾವ್ ಪಾಟೀಲ ಇದ್ದರು.