ವಿಜಯಪುರ: ಸುಕ್ಷೇತ್ರ ಗುಡ್ಡಾಪುರದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರ ಬಿಡುಗಡೆಗೊಳಿಸಿದ ರೂ.11 ಕೋಟಿ ಅನುದಾನದಡಿ ನಿರ್ಮಾಣಗೊಂಡಿರುವ ಕರ್ನಾಟಕ ಭವನ ಉದ್ಘಾಟನೆ ಸಿದ್ಧಗೊಂಡಿದ್ದು, ಆ.1 ರಂದು ಪಕ್ಷಾತೀತವಾಗಿ ಎಲ್ಲ ನಾಯಕರ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಶ್ರೀ ಗುಡ್ಡಾಪುರ ದಾನಮ್ಮದೇವಿ ಟ್ರಸ್ಟ್‌ನ ಅಧ್ಯಕ್ಷ ವಿಜುಗೌಡ ಪಾಟೀಲ ತಿಳಿಸಿದರು.
ಹಿಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಇಚ್ಛಾ ಶಕ್ತಿ ಫಲವಾಗಿ, ಅಂದಿನ ಸಚಿವೆ ಶಶಿಕಲಾ ಜೊಲ್ಲೆ ಅವರು ವಿಶೇಷ ಮುತುವರ್ಜಿ ವಹಿಸಿ ಅನುದಾನ ಬಿಡುಗಡೆಗೊಳಿಸಿದ್ದರು. ಇದೀಗ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಕಲ ಸಿದ್ದತೆ ಕೈಗೊಳ್ಳಲಾಗಿದೆ. ಭವನದಲ್ಲಿ ಕೇವಲ ದಾಸೋಹಕ್ಕೆ ಅವಕಾಶ ಇದ್ದು, ಏಕ ಕಾಲಕ್ಕೆ ನಾಲ್ಕು ಸಾವಿರ ಜನ ಪ್ರಸಾದ ಸೇವಿಸಬಹುದಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ದುದನಿಯ ಮೌನ ತಪಸ್ವಿ ಜಡೆ ಶಾಂತಲಿಂಗ ಶ್ರೀಗಳು, ಜಿಡಗಾ ಮಠದ ಮುರುಘರಾಜೇಂದ್ರ ಮಹಾಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ವಿಶೇಷವಾಗಿ ಅವಧೂತ ಪರಂಪರೆಯ ವಿನಯ ಗುರೂಜಿ ಆಗಮಿಸುತ್ತಿದ್ದಾರೆ. ಜಗದ್ಗುರು ಮಹಾದೇವ ಶಿವಾಚಾರ್ಯರು, ಗುಡ್ಡಾಪುರದ ಗುರುಪಾದ ಶಿವಾಚಾರ್ಯರು, ಜಯಸಿದ್ಧೇಶ್ವರ ಮಹಾಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಪಾಲ್ಗೊಳ್ಳುವರು. ಜತ್ತ ಶಾಸಕ ವಿಕ್ರಮಸಿಂಹ ಸಾವಂತ ಅಧ್ಯಕ್ಷತೆ ವಹಿಸುವರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ಸಚಿವ ರಾಮಲಿಂಗ ರೆಡ್ಡಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಉದ್ಘಾಟನೆ ನೆರವೇರಿಸುವರು. ಶಿಷ್ಟಾಚಾರ ಪ್ರಕಾರ ಎಲ್ಲ ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಪಕ್ಷಾತೀತವಾಗಿ ಎಲ್ಲ ನಾಯಕರಿಗೆ ಆಹ್ವಾನ ನೀಡಲಾಗಿದೆ ಎಂದರು.
ಗುಡ್ಡಾಪುರ ಸುಕ್ಷೇತ್ರಗಳಲ್ಲೊಂದು. ಅಲ್ಲಿ ಯಾವುದೇ ರಾಜಕಾರಣ ಮಾಡಲ್ಲವೆಂದು ನಾವೆಲ್ಲರೂ ಪ್ರತಿಜ್ಞೆ ಮಾಡಿದ್ದೇವೆ. ಆದರೂ ಕೆಲವರು ರಾಜಕಾರಣ ಮಾಡುತ್ತಿದ್ದಾರೆ. ಅವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಅವರನ್ನು ತಾಯಿಯೇ ನೋಡಿಕೊಳ್ಳಲಿದ್ದಾಳೆ ಎಂದರು.
ಸಿಎಂ ಸಿದ್ದರಾಮಯ್ಯ ಕೂಡ ಬಜೆಟ್‌ನಲ್ಲಿ 11 ಕೋಟಿ ರೂಪಾಯಿ ಘೋಷಣೆ ಮಾಡಿದ್ದಾರೆ. ಪಕ್ಷಾತೀತವಾಗಿ ಎಲ್ಲರೂ ದೇವಸ್ಥಾನಕ್ಕೆ ಅನುದಾನ ಕೊಟ್ಟಿದ್ದಾರೆ. ಅವರನ್ನು ಸ್ಮರಿಸುತ್ತೇವೆ. ಮಹಾರಾಷ್ಟ್ರ ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ನೀಡಿಲ್ಲ. ಕರ್ನಾಟಕದ ಸಹಾಯ ಸಹಕಾರ ಹೆಚ್ಚಾಗಿದೆ. ಹೀಗಾಗಿ ಕರ್ನಾಟಕದ ಎಲ್ಲ ನಾಯಕರನ್ನು ಆಹ್ವಾನಿಸುತ್ತಿದ್ದೇವೆ. ಮಹಾರಾಷ್ಟ್ರ ಸರ್ಕಾರದಿಂದಲೂ ಅನುದಾನಕ್ಕೆ ಬೇಡಿಕೆ ಇರಿಸಿದ್ದು, ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದರು.
ಟ್ರಸ್ಟ್‌ನ ಹೊಸ ಆಡಳಿತ ಮಂಡಳಿ ರಚನೆಯಾದ ಕೇವಲ 30 ದಿನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಾಗಿದೆ. ಭಕ್ತರಿಗಾಗಿ ಸಲಹಾ ಪೆಟ್ಟಿಗೆ ಇಡಲಾಗಿದೆ. ಭಕ್ತರು ತಮ್ಮ ಸಲಹೆ- ಸೂಚನೆಗಳನ್ನು ಬರೆದು ಪೆಟ್ಟಿಗೆಯಲ್ಲಿ ಹಾಕಿದರೆ ಆದಷ್ಟು ಅವುಗಳನ್ನು ಅನುಷ್ಟಾನಕ್ಕೆ ತರಲು ಯತ್ನಿಸಲಾಗುವುದು ಎಂದರು.
ಟ್ರಸ್ಟ್ ಉಪಾಧ್ಯಕ್ಷ ಚಂದ್ರಶೇಖರ ಗೊಬ್ಬಿ, ಮುಖಂಡರಾದ ಚಂದ್ರಶೇಖರ ಇಂಡಿ, ಶಂಬುಲಿಂಗ ಮಮದಾಪುರ, ಷಣ್ಮುಖಪ್ಪ ಗುಡ್ಡೋಡಗಿ, ಸಾಗರ ಕೆಂಪಣ್ಣವರ, ದಾನಪ್ಪ ಪೂಜಾರಿ ಮತ್ತಿತರರಿದ್ದರು.