ಮಂಡ್ಯ: ಸರ್ಕಾರಿ ಯೋಜನೆಗಳ ಸವಲತ್ತನ್ನು ಕಾರ್ಮಿಕರು ಪರಿಣಾಮಕಾರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಕೆರೆಯಂಗಳದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಮಿಕ ಭವನ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಕಾರ್ಮಿಕರು, ರೈತರು ಹಾಗೂ ಮಹಿಳೆಯರ ಅಭಿವೃದ್ಧಿಗಾಗಿ ಶ್ರಮ ವಹಿಸುತ್ತಿದೆ ಎಂದರು.
ಕಾರ್ಮಿಕ ಮುಖಂಡರು ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಸರ್ಕಾರ ನೀಡುವ ಯೋಜನೆಗಳ ಕುರಿತು ಮನೆ ಮನೆಗೆ ಮಾಹಿತಿ ನೀಡುವ ಕಾರ್ಯಕೈಗೊಳ್ಳಿ. ಆಗ ಸರ್ಕಾರಿ ಯೋಜನೆಗಳು ಅವರನ್ನು ತಲುಪುತ್ತದೆ. ಮಾತ್ರವಲ್ಲದೆ ಇದರಿಂದ ಆರ್ಥಿಕ ಅಭಿವೃದ್ಧಿ ಹೊಂದುತ್ತಾರೆ. ಕಾರ್ಮಿಕ ಭವನದ ಮೂಲ ಉದ್ದೇಶ ಕಾರ್ಮಿಕರಿಗೆ ಅಗತ್ಯ ಮಾಹಿತಿ ಒದಗಿಸುವುದು. ನವ ಭಾರತ ನಿರ್ಮಾಣಕ್ಕೆ ಕಾರ್ಮಿಕರ ಕೊಡುಗೆ ಅಪಾರ. ಆದ್ದರಿಂದ ಈ ಭವನ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.
ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಮಲ್ಲಿಕಾರ್ಜುನ ಬಾಲದಂಡಿ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಮುಡಾ ಅಧ್ಯಕ್ಷ ನಯೀಂ ಇತರರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ವೇತನದ ಚೆಕ್ ಹಾಗೂ ಚಾಲನೆ ಸಂದರ್ಭದಲ್ಲಿ ಮೃತಪಟ್ಟ ಚಾಲಕರಿಗೆ ಸಂಬಂಧಿಸಿದಂತೆ ಅವರ ಕುಟುಂಬದವರಿಗೆ ಪರಿಹಾರದ ಚೆಕ್ ವಿತರಿಸಲಾಯಿತು.