ಜಿಲ್ಲೆ

ಕಾಚಿಘಟ್ಟ ಗ್ರಾಪಂ ಕಚೇರಿ ನೂತನ ಕಟ್ಟಡ ಉದ್ಘಾಟನೆ

ಅರಸೀಕೆರೆ ಗ್ರಾಮಾಂತರ: ಬಾಣಾವರ ಹೋಬಳಿ ಕಾಚಿಘಟ್ಟ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿ ನೂತನ ಕಟ್ಟಡವನ್ನು ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಸೋಮವಾರ ಉದ್ಘಾಟಿಸಿದರು.


ಗ್ರಾಮ ಪಂಚಾಯತಿ ಕಚೇರಿ ಕಟ್ಟಡ ಬಹಳ ಹಳೆಯದಾಗಿದ್ದು, ಶಿಥಿಲವಾಗಿತ್ತು. ಗ್ರಾ.ಪಂ. ಸದಸ್ಯರು ಹೊಸ ಕಟ್ಟಡಕ್ಕೆ ಬೇಡಿಕೆ ಸಲ್ಲಿಸಿದ್ದರು. ಆದ್ದರಿಂದ ಇಲ್ಲಿಗೆ ಕಟ್ಟಡ ಮಂಜೂರು ಮಾಡಲಾಯಿತು. ಎಲ್ಲರ ಪ್ರಯತ್ನದ ಫಲವಾಗಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿರುವುದು ಸಂತಸ ತಂದಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತೆ ಶಾಸಕರು ಕಿವಿಮಾತು ಹೇಳಿದರು.


ಜಿ.ಪಂ. ಮಾಜಿ ಅಧ್ಯಕ್ಷ ಬಿಳಿ ಚೌಡಯ್ಯ ಮಾತನಾಡಿ, ಶಾಸಕರ ಶ್ರಮದ ಫಲ ಇಡೀ ಅರಸೀಕೆರೆ ಕ್ಷೇತ್ರ ಅಭಿವೃದ್ಧಿ ಆಗಿದೆ. ಕುಡಿಯುವ ನೀರು, ರಸ್ತೆ, ಸಮುದಾಯ ಭವನ, ದೇವಸ್ಥಾನ, ಶಾಲೆಗಳು ಎಲ್ಲವನ್ನೂ ನಿರ್ಮಿಸಿಕೊಟ್ಟಿದ್ದಾರೆ ಎಂದರು.


ತಾಪಂ ಸಿಇಒ ಸತೀಶ್, ಗ್ರಾ.ಪಂ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ಸೋಮಣ್ಣ ಸದಸ್ಯರಾದ ಮೀನಾಕ್ಷಮ್ಮ , ಬಸವರಾಜು, ಮಹೇಶ, ಶಿವಶಂಕರ, ಪವಿತ್ರ, ಪಿಡಿಒ ಕೊಟ್ರೇಶ್, ಮುಖಂಡರಾದ ಮಹಂತೇಶ , ಬಾಣಾವರ ಜಯಣ್ಣ, ರವಿಶಂಕರ್, ಸುರೇಶ, ಮೋಕ್ಷರಾಜು , ಗ್ರಾಮಸ್ಥರು ಹಾಜರಿದ್ದರು.