ಚಡಚಣ ಗ್ರಾಮದ ಶ್ರೀಸಂಗಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ‘ಉದ್ಯೋಗ ಮೇಳ-2025’ರ ಉದ್ಘಾಟನೆ ನೆರವೇರಿತು. ಸಂಸದ ರಮೇಶ ಜಿಗಜಿಣಗಿ, ಶಾಸಕ ವಿಠಲ ಕಟಕದೊಂಡ, ಕಾಂತಾ ನಾಯಕ ಮತ್ತಿತರರಿದ್ದಾರೆ.  
ಜಿಲ್ಲೆ

ಉದ್ಯೋಗ ಮೇಳ-2025 ರ ಉದ್ಘಾಟನೆ, ನಿರುದ್ಯೋಗ ನಿರ್ಮೂಲನೆಗೆ ಶ್ರಮಿಸೋಣ ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಹಿಂದುಳಿದ ಪ್ರದೇಶವಾದ ಚಡಚಣ ಭಾಗದ ನಿರುದ್ಯೋಗಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಉದ್ಯೋಗಾವಕಾಶ ಕಲ್ಪಿಸಬೇಕೆಂದು ಸಂಸ ರಮೇಶ ಜಿಗಜಿಣಗಿ ಹೇಳಿದರು.

ಚಡಚಣ ಗ್ರಾಮದ ಶ್ರೀಸಂಗಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲಾಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಉದ್ಯೋಗ ಮೇಳ-2025’ರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿಯೇ ಅತೀ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊತ್ತಿರುವ ಚಡಚಣ ಭಾಗದಲ್ಲಿ ಸಾಕಷ್ಟು ಉದ್ಯೋಗಾಕಾಂಕ್ಷಿಗಳಿದ್ದಾರೆ. ಹೀಗಾಗಿ ಪ್ರಥಮ ಆದ್ಯತೆ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವಂತೆ ಅವರು ಉದ್ಯೋಗದಾತರಿಗೆ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವಿಠಲ ದೋಂಡಿಬಾ ಕಟಕದೊಂಡ ಮಾತನಾಡಿ, ಉದ್ಯೋಗದಾತರು ತಮ್ಮ ಮನೆ ಬಾಗಲಿಗೆ ಉದ್ಯೋಗಗಳನ್ನು ನೀಡಲು ಇಲ್ಲಿ ಆಗಮಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅರ್ಹತೆಗೆ ತಕ್ಕಂತೆ ಉದ್ಯೋಗಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು. ಉದ್ಯೋಗ ಸಿಗದಿದ್ದರೆ ಯಾರೂ ಹತಾಶ ಮನೋಭಾವ ಹೊಂದಬಾರದು. ಮುಂದಿನ ದಿನಗಳಲ್ಲಿ ಉದ್ಯೋಗ ಸಿಗುತ್ತದೆ ಎಂಬ ಮನೋಭಾವ ತಾವುಗಳು ಬೆಳೆಸಿಕೊಳ್ಳಬೇಕು ಎಂದರು.

ರಾಜ್ಯ ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಮಾತನಾಡಿ, ಜಿಲ್ಲೆಯಲ್ಲಿ ಪ್ರಾಯೋಗಿವಾಗಿ ಶಾಲಾ ಹಂತದಲ್ಲಿ ನನ್ನ ವೃತ್ತಿ ನನ್ನ ಆಯ್ಕೆ ಹಾಗೂ ಕಾಲೇಜು ಹಂತದಲ್ಲಿ ಕಲಿಕೆ ಜೊತೆ ಕೌಶಲ ಎಂಬ ವಿಭಿನ್ನ ರೀತಿಯ ಕೌಶಲ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕಾಲೇಜು ವಿಭಾಗದಲ್ಲಿ ಪ್ರಥಮ ಹಂತವಾಗಿ ನಗರದ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಈ ಕುರಿತು ಈಗಾಗಲೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿ ಉತ್ತಮ ಫಲಿತಾಂಶ ದೊರೆತಿದೆ. ಇದರ ಜೊತೆಗೆ ಶಾಲಾ ಹಂತಗಳಲ್ಲಿಯೂ ಶಿಕ್ಷಣ ಜೊತೆಗೆ ಕೌಶಲಾಧಾರಿತ ತರಬೇತಿ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶಿಕ್ಷಣ ಅನುಗುಣವಾಗಿ ತರಬೇತಿ ನೀಡಲಾಗುವುದು ತರಬೇತಿ ಪಡೆದ ಮೇಲೆ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಬಹಳ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಬೇರೆ ದೇಶಗಳಿಗೆ ವಲಸೆ ಹೋಗಲು ಬಯಸಿದ್ದಲ್ಲಿ ಅವರಿಗೂ ಆ ದೇಶದ ಭಾಷೆ ಅದರೊಂದಿಗೆ ಆಂಗ್ಲ ಭಾಷೆಯನ್ನು ಸರಳವಾಗಿ ಕಲಿಯುವಂತೆ ಕೌಶಲಾಭಿವೃದ್ಧಿ ಇಲಾಖೆಯಿಂದ ತರಬೇತಿ ನೀಡಲಾಗುತ್ತದೆ. ದೇಶದಲ್ಲಿ ವಿದ್ಯಾರ್ಥಿಗಳು ತಾವು ಕಲಿತ ವಿದ್ಯಾರ್ಹತೆಯೊಂದಿಗೆ ಉದ್ಯೋಗ ಕಲ್ಪಿಸಿಕೊಡಲು ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಇಲ್ಲಿ ಸುಮಾರು 40ಕ್ಕಿಂತಲೂ ಹೆಚ್ಚು ಕಂಪನಿಗಳು ಆಗಮಿಸಿವೆ. ಈಗಾಗಲೇ 2 ಸಾವಿರ ವಿದ್ಯಾರ್ಥಿಗಳು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ. ಆ.16 ರಂದು ಕಲಬುರಗಿಯಲ್ಲಿ ವಲಯ ಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇಲ್ಲಿ ಉದ್ಯೋಗ ಸಿಗದವರು ಅಲ್ಲಿ ಭಾಗವಹಿಸಬಹುದಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿದರು. ವಿವಿಧ ಕಂಪನಿಗಳಲ್ಲಿ ಆಯ್ಕೆಯಾದ 5 ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಉದ್ಯೋಗ ಪತ್ರ ನೀಡಲಾಯಿತು.

ಜಿಪಂ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ, ಉದ್ಯೋಗ ವಿನಿಮಯ ಇಲಾಖೆಯ ಅಧಿಕಾರಿ ಮಹೇಶ ಮಾಳವಾಡೆಕರ, ಚಡಚಣ ಪಟ್ಟಣ ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ದೋತ್ರೆ, ಉಪಾಧ್ಯಕ್ಷ ಇಲಾಹಿ ನದಾಫ್, ಸಂಗಮೇಶ್ವ ಶಿಕ್ಷಣ ಸಂಸ್ಥೆಯ ನಿರ್ದೇಶಕ ಬಸವರಾಜ ಯಂಕಂಚಿ, ಕಾರ್ಯದರ್ಶಿ ಬಿ.ಎಸ್. ಎಡವೆ, ನಿರ್ದೇಶಕ ಎಸ್.ಆರ್. ಆವಜಿ, ಆಡಳಿತಾಧಿಕಾರಿ ಚೋರಗಿ ಮತ್ತಿತರರಿದ್ದರು.

ವಿಜಯಪುರದ ಎಲ್‌ಐಸಿ, ಸಂತೋಷ ಅಟೋ ವಿಂಗ್ಸ್, ಸ್ವತಂತ್ರ ಮೈಕ್ರೋ ಫೈನಾನ್ಸ್, ನವ ಭಾರತ ಪರ್ಟಿಲೈಜರ್, ಮಲಬಾರ ಗೋಲ್ಡ್ ಮತ್ತು ಡೈಮಂಡ್ಸ್, ಎಂಇಎಸ್ ಶಿಕ್ಷಣ ಸಂಸ್ಥೆ ಚಡಚಣ, ವಿಜಯಪುರದ ನಾರಾಯಣ ಹುಂಡೈ ಕಾರ್ ಶೋರೂಂ ಜೊತೆಗೆ 40ಕ್ಕಿಂತಲೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು.

ಚಡಚಣ ತಾಪಂ ಇಒ ಸಂಜು ಖಡಗೇಕರ ಸ್ವಾಗತಿಸಿದರು. ಸುನಂದಾ ಬಾಲಪ್ಪನವರ ನಿರೂಪಿಸಿದರು. ಕೌಶಲಾಭಿವೃದ್ಧಿ ಇಲಾಖೆ ಅಧಿಕಾರಿ ಸಿ.ಬಿ. ಕುಂಬಾರ ವಂದಿಸಿದರು.

ಉದ್ಯೋಗ ಮೇಳದಲ್ಲಿ 2542 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು 1458 ವಿದ್ಯಾರ್ಥಿಗಳು ಭಾಗವಹಿಸಿದ್ದರು. 243 ಉದ್ಯೋಗಾಂಕಾಕ್ಷಿಗಳು ಆಯ್ಕೆಯಾಗಿದ್ದಾರೆ. 214 ವಿದ್ಯಾರ್ಥಿಗಳು ವೇಟಿಂಗ್ ಲಿಸ್ಟ್‌ನಲ್ಲಿದ್ದಾರೆ. ಒಟ್ಟು 43 ವಿದ್ಯಾರ್ಥಿಗಳು ನೋಂದಣಿಯಾದ್ದು 25ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು.