ಉಡುಪಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಾಕ್ಷರತಾ ದಿನವನ್ನು ಡಾ. ಅಶೋಕ್​ ಕಾಮತ್​ ಉದ್ಘಾಟಿಸಿದರು. ಯೋಗಾನರಸಿಂಹ ಸ್ವಾಮಿ ಕೆ.ಎಂ., ಉಮೇಶ್​ ಆಚಾರ್ಯ ಇತರರಿದ್ದರು. 
ಜಿಲ್ಲೆ

ಸಾಕ್ಷರತೆಯು ವ್ಯಕ್ತಿಯ ಗೌರವದ ಪ್ರತೀಕ

ಡಾ. ಅಶೋಕ್​ ಕಾಮತ್​ ಅಭಿಮತ | ಅಂತಾರಾಷ್ಟ್ರೀಯ ದಿನಾಚರಣೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಸಾಕ್ಷರತೆಯು ವ್ಯಕ್ತಿಯ ವೈಯಕ್ತಿಕ ಗುಣಲಕ್ಷಣಗಳಲ್ಲಿ ಬಹುಮುಖ್ಯವಾಗಿದ್ದು, ಗೌರವದ ಪ್ರತೀಕವಾಗಿದೆ. ಓದುವಿಕೆಯ ಪ್ರಾಮುಖ್ಯತೆ, ಬರವಣಿಗೆ, ಕೌಶಲದ ಮಹತ್ವಗಳು ವ್ಯಕ್ತಿಯು ಸಾಕ್ಷರತೆ ಹೊಂದಿದಾಗ ಲಭಿಸಬಹುದಾದ ಲಾಭವಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ಪ್ರಾಂಶುಪಾಲ ಡಾ. ಅಶೋಕ್​ ಕಾಮತ್​ ಅಭಿಮತ ವ್ಯಕ್ತಪಡಿಸಿದರು.

ಉಡುಪಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ 58ನೇ ಸಾಕ್ಷರತಾ ದಿನ ಉದ್ಘಾಟಿಸಿ ಮಾತನಾಡಿದರು.

ಜ್ಞಾನ, ಕೌಶಲ ಅಗತ್ಯ

ಉಡುಪಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಯೋಗಾನರಸಿಂಹ ಸ್ವಾಮಿ ಕೆ.ಎಂ. ಮಾತನಾಡಿ, ಜೀವನ ಅತ್ಯುತ್ತಮವಾಗಿ ನಿರ್ವಹಿಸಲು ಮೂಲ ಕೌಶಲಗಳ ಅಗತ್ಯತೆ ಇರುತ್ತದೆ. ಅವುಗಳಲ್ಲಿ ಓದುವ, ಬರೆಯುವ ಹಾಗೂ ಇತರರಿಗೆ ತಿಳಿಸುವ ಸಾಕ್ಷರತಾ ಕೌಶಲ ಬಹಳ ಮುಖ್ಯವಾಗಿದೆ. ವಿವಿಧ ಸಾಕ್ಷರತೆಗಳ ಜ್ಞಾನ ಹಾಗೂ ತಿಳಿವಳಿಕೆ ಪ್ರಸ್ತುತ ಕಾಲದಲ್ಲಿ ಅತಿ ಅಗತ್ಯ ಎಂದರು.

ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಸಹಾಯಕ ಉಮೇಶ್​ ಆಚಾರ್ಯ, ತಾಲೂಕು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು, ಸಾಕ್ಷರತಾ ನೋಡಲ್​ ಬಿಆರ್​ಪಿಗಳು, ಸಾಕ್ಷರತಾ ನೋಡಲ್​ ಶಿಕ್ಷಕರು, ಬೋಧಕರು, ನವ ಸಾಕ್ಷರರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಪೌರಕಾರ್ಮಿಕರಿಗೆ ಪ್ರಮಾಣಪತ್ರ ವಿತರಣೆ

ಕಾರ್ಯಕ್ರಮದಲ್ಲಿ ಸಾಕ್ಷರತಾ ಪ್ರೇರಕರನ್ನು ಗೌರವಿಸಿ, ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಮಾಹಿತಿ ಪೋಸ್ಟರ್​ ಬಿಡುಗಡೆ ಮಾಡಲಾಯಿತು. ನವಸಾಕ್ಷರರಿಗೆ ಸಾಕ್ಷರತಾ ಪ್ರಮಾಣವಚನ ಬೋಧಿಸಲಾಯಿತು. ನವಸಾಕ್ಷರ ಪೌರ ಕಾರ್ಮಿಕರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಮಟ್ಟದಲ್ಲಿ ಸಾಕ್ಷರತಾ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಪ್ರಬಂಧ ರಚನೆ, ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು
.