ಜಿಲ್ಲೆ

ಸುಧಾರಿತ ವೈದ್ಯಕೀಯ ಸೇವೆ ನೀಡುವ ಗುರಿ : ಡಿ.ಹರ್ಷೇಂದ್ರ ಕುಮಾರ್ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರತಿಯೊಂದು ಸಂಸ್ಥೆ ಕೂಡ ಸೇವೆಯ ಉದ್ದೇಶದಿಂದ ನಡೆಸಲ್ಪಡುತ್ತದೆ. ಖರ್ಚು ಬಗ್ಗೆ ಚಿಂತಿಸದೆ ಜನತೆಗೆ ಉತ್ತಮ ಸೇವೆ ನೀಡುವ ಗುರಿಯೊಂದಿಗೆ ಕೆಲಸ ನಿರ್ವಹಿಸುತ್ತದೆ. ಇದೇ ಉದ್ದೇಶದಿಂದ ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವೈದ್ಯಕೀಯ ಸಲಕರಣೆಗಳನ್ನು ಒದಗಿಸಲಾಗಿದೆ. ಇದರಿಂದಾಗಿ ಸುಧಾರಿತ ವೈದ್ಯಕೀಯ ಸೇವೆ ನೀಡಲು ಸಹಕಾರಿಯಾಗಿದೆ. ಹಾಗಾಗಿ ಈ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚೆಗೆ ನಡೆಯುತ್ತಿರುವ ಯಶಸ್ವಿ ಶಸ್ತ್ರಚಿಕಿತ್ಸೆಗಳು ಕೂಡ ಈ ಆಸ್ಪತ್ರೆಯ ಮೇಲೆ ಗ್ರಾಮೀಣ ಜನತೆಯಲ್ಲಿ ಭರವಸೆ ಹೆಚ್ಚಿಸಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಹೇಳಿದರು.

ಡಾ.ಡಿ ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಹೇಮಾವತಿ ವಿ.ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಳವಡಿಸಿದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ 30 ಲಕ್ಷ ಮೌಲ್ಯದ 2 ಬಿಪಿಎಲ್ ಲೋವೆನ್‌ಸ್ಪೈನ್ ಎಲಿಸಾ-600 ವೆಂಟಿಲೇಟರ್‌ಗಳನ್ನು ಉದ್ಘಾಟಿಸಿ ಮಾತನಾಡಿದರು.

ಈ ಆಸ್ಪತ್ರೆ ಅನೇಕ ಮಂದಿಗೆ ಉದ್ಯೋಗದ ಅವಕಾಶ ನೀಡಿ ಅನೇಕ ಕುಟುಂಬಗಳ ನೆಮ್ಮದಿಗೆ ಕಾರಣವಾಗಿದೆ. ಇತರ ಅನೇಕರಿಗೆ ಪರೋಕ್ಷ ರೀತಿಯಲ್ಲಿ ವಿವಿಧ ಅವಕಾಶ ಒದಗಿಸುವ ಮೂಲಕ ಪ್ರಯೋಜನಕಾರಿಯಾಗಿದೆ. 9 ಹಾಸಿಗೆಗಳ ಸುಸಜ್ಜಿತ ಐಸಿಯು ಹೊಂದಿರುವ ಆಸ್ಪತ್ರೆ ಈಗಾಗಲೇ 6 ವೆಂಟಿಲೇಟರ್‌ಗಳನ್ನು ಹೊಂದಿದ್ದು, ಈಗ ಒಟ್ಟು 8 ವೆಂಟಿಲೇಟರ್‌ಗಳಿವೆ ಎಂದು ಹೇಳಿದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಸ್ವಾಗತಿಸಿದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದೇವೇಂದ್ರ ಕುಮಾರ್ ಪಿ., ಮುಖ್ಯವೈದ್ಯಾಧಿಕಾರಿ ಡಾ.ಸಾತ್ವಿಕ್ ಜೈನ್, ಇಲ್ಲಿನ ವೈದ್ಯರು, ದಾದಿಯರು ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಹೃದಯಾಘಾತ, ಸ್ಟ್ರೋಕ್, ಉಸಿರಾಟದ ಸಮಸ್ಯೆ ಮುಂತಾದ ತುರ್ತು ಸಂದರ್ಭದಲ್ಲಿ ಅತ್ಯಾಧುನಿಕ ವೆಂಟಿಲೇಟರ್‌ಗಳು ಬಹಳ ಉಪಯುಕ್ತವಾಗಲಿದೆ. ಇದು ಉತ್ತಮ ಗುಣಮಟ್ಟದ ಉಸಿರಾಟವನ್ನು ಒದಗಿಸುತ್ತದೆ. ಇದರಲ್ಲಿ ಅಳವಡಿಸಿರುವ ಪ್ಯಾರಾಮೀಟರ್ ಹಾಗೂ ರೋಗಿಯಿಂದ ಸಂಪರ್ಕ ಕಳೆದುಕೊಂಡಾಗ ಎಚ್ಚರಿಸುವ ಸೈರನ್ ಹೊಂದಿದ್ದು, ರೋಗಿಗೆ ಉಸಿರಾಟದಲ್ಲಿ ವ್ಯತ್ಯಯವಾಗದಂತೆ ನಿಗಾ ವಹಿಸುತ್ತದೆ. ಅಗತ್ಯ ಬಿದ್ದಾಗ ಆಂಬುಲೆನ್ಸ್‌ಗಳಲ್ಲಿಯೂ ಅಳವಡಿಸಲು ಸಾಧ್ಯವಿದೆ. ಮಂಗಳೂರು ಬಳಿಕ ಈ ಅತ್ಯಾಧುನಿಕ ವೆಂಟಿಲೇಟರ್ ಹೊಂದಿರುವ ಏಕೈಕ ಆಸ್ಪತ್ರೆ ಇದಾಗಿದೆ. - ಡಿ.ಹರ್ಷೇಂದ್ರ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ