ಉಳ್ಳಾಲ: ಭಾಗವತರು ಹೇಳಿದಂತೆ ಯಕ್ಷಗಾನ ನಡೆಯಬೇಕಿರುವುದರಿಂದ ರಂಗಸ್ಥಳದಲ್ಲಿ ಭಾಗವತರೇ ಮುಖ್ಯಸ್ಥರು. ಯಕ್ಷಗಾನ ಗಂಡು ಕಲೆಯನ್ನಾಗಿ ಬೆಳೆಸಬೇಕಾದರೆ ಭಾಗವತರ ಶ್ರಮ ಅಪಾರ ಎಂದು ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಮ ಭಟ್ ಅಭಿಪ್ರಾಯಪಟ್ಟರು.
ಕೈರಂಗಳ ಪುಣ್ಯಕೋಟಿನಗರ ಶಾರದಾ ಗಣಪತಿ ವಿದ್ಯಾಕೇಂದ್ರದ ವತಿಯಿಂದ, ತೆಕ್ಕುಂಜೆ ಗಣಪತಿ ಭಟ್ಟ ಸ್ಮಾರಕ ‘ಯಕ್ಷವೃಕ್ಷ’ ಆಶ್ರಯದಲ್ಲಿ, ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಯಕ್ಷಗಾನ ಹಿಮ್ಮೇಳ ತರಬೇತಿ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಯಾವುದಾದರೊಂದು ಸಹಪಠ್ಯ ಚಟುವಟಿಕೆಯಲ್ಲಿ ಭಾಗವಹಿಸಿ ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕೆನ್ನುವ ನೆಲೆಯಲ್ಲಿ ವಿವಿಧ ಚಟುವಟಿಕೆ ನಡೆಸಲಾಗುತ್ತಿದೆ. ಹಿರಿಯರು ಯಕ್ಷಗಾನಕ್ಕೆ ಕೊಟ್ಟ ಸೇವೆ ಜನಮಾನಸಕ್ಕೆ ಮುಟ್ಟಬೇಕೆನ್ನುವ ನೆಲೆಯಲ್ಲಿ ಶಾಲೆಯಲ್ಲಿ ಯಕ್ಷಗಾನ ಕಲಿಕೆ ಆರಂಭಿಸಲಾಗಿದ್ದು ಈ ವರ್ಷ ಶಾಲೆಯ ಮಕ್ಕಳಿಂದಲೇ ಎರಡು ತಂಡಗಳಾಗಿ ದೇವಿ ಮಹಾತ್ಮೆ ಜೋಡಾಟ ಆಡಿಸುವ ಆಸೆ ಇದೆ ಎಂದು ತಿಳಿಸಿದರು.
ಯಕ್ಷಗಾನ ನಾಟ್ಯಗುರು ಅಶ್ವಥ್ ಮಂಜನಾಡಿ ಮಾತನಾಡಿ, ವಯಸ್ಸಾದ ನಂತರ ಈ ಕಲೆಯನ್ನು ಕಲಿಯಲು ಅಸಾಧ್ಯವಾಗಿರುವುದರಿಂದ ಈ ವಯಸ್ಸಿನಲ್ಲೇ ಹಿಮ್ಮೇಳ ಕಲಿಯಬೇಕು. ಯಕ್ಷಗಾನದಲ್ಲಿ ನಾಟ್ಯ ಕಲಿತರೆ ಸಾಲದು. ಹಿಮ್ಮೇಳ ಕಲಿಕೆಯೂ ಅಗತ್ಯವಾಗಿದ್ದು ವಿದ್ಯಾರ್ಥಿಗಳು ಶ್ರಮಪಟ್ಟು ವಿದ್ಯೆ ಕಲಿಯಿರಿ ಎಂದರು.
ಶಿಕ್ಷಕ, ಭಾಗವತ ಮುರಳೀಕೃಷ್ಣ ಶಾಸ್ತ್ರಿ, ಯಕ್ಷಗುರುಗಳಾದ ಶ್ರೀಧರ್ ವಿಟ್ಲ, ಲವಕುಮಾರ್ ಐಲ, ಅಶ್ವಥ್ ಮಂಜನಾಡಿ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ಯೋಗಿತಾ ಸ್ವಾಗತಿಸಿದರು. ಶಿಕ್ಷಕ ಶ್ರೀನಿವಾಸ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸ್ವಾತಿ ವಂದಿಸಿದರು. ಶಿಕ್ಷಕ ಚಂದ್ರಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಶೈಕ್ಷಣಿಕ ಜೀವನದಲ್ಲೇ ಯಕ್ಷಗಾನದಲ್ಲಿ ಹಿಮ್ಮೇಳ, ಮುಮ್ಮೇಳ ಕಲಿತರೆ ತಾಳ್ಮೆ, ವಿಭಿನ್ನ ವಿಷಯಗಳನ್ನು ಅರ್ಥ ಮಾಡುವ ಸಾಮರ್ಥ್ಯ, ಜ್ಞಾನ ಎಲ್ಲವೂ ಲಭಿಸುತ್ತದೆ. ಯಕ್ಷಗಾನ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಲು ಸಹಾಯ ಮಾಡುತ್ತದೆಯೇ ಹೊರತು ಕಲಿಕೆಗೆ ತೊಂದರೆ ನೀಡದು. ಮುರಳೀಕೃಷ್ಣ ಶಾಸ್ತ್ರಿ ಶಿಕ್ಷಕ, ಭಾಗವತ