ಜಿಲ್ಲೆ

ಗಂಗಾಮತಸ್ಥ ಭವನ ನಿರ್ಮಾಣಕ್ಕೆ ಅನುದಾನ: ಶಾಸಕ ರವಿಕುಮಾರ್ ಗಣಿಗ ಭರವಸೆ

ಮಂಡ್ಯ: ಗಂಗಾಮತಸ್ಥ ಸಮುದಾಯದ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ಭರವಸೆ ನೀಡಿದರು.

ನಗರದ ರೈತ ಸಭಾಂಗಣದಲ್ಲಿ ಜಿಲ್ಲಾ ಗಂಗಾಮತಸ್ಥರ ಸಂಘ, ಮಂಡ್ಯ ತಾಲೂಕು ಮಹಿಳಾ ಗಂಗಾಮತಸ್ಥರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಮಂಡ್ಯ ತಾಲೂಕು ಮಹಿಳಾ ಗಂಗಾಮತಸ್ಥರ ಸಂಘ ಉದ್ಘಾಟನೆ, ಎಸ್‌ಎಸ್‌ಎಲ್‌ಸಿ ಮತ್ತು ದ್ವೀತಿಯ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ತಾಲೂಕು ಮಹಿಳಾ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಭವನ ನಿರ್ಮಾಣ ಸಂಬಂಧ ಈಗಾಗಲೇ 5 ಲಕ್ಷ ರೂ ನೀಡಿದ್ದೇನೆ. ಮುಂದೆ ಇನ್ನೂ 5 ಲಕ್ಷ ರೂ ಜತೆಗೆ ಒಟ್ಟಾರೆ 20 ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಗಂಗಾಮತಸ್ಥ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗದೇ ಸಾಧನೆ ಮಾಡುವ ಕಡೆ ಗಮನ ಹರಿಸಬೇಕು. ಹಿಂದುಳಿದ ಸಮಾಜಗಳು ಅಭಿವೃದ್ಧಿ ಆಗದೇ ಹೋದರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಮೊದಲು ಶಿಕ್ಷಿತರಾಗಬೇಕು. ಗಂಗಾಮತಸ್ಥ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿದೆ. ಅದೇ ರೀತಿ ಸಮುದಾಯ ಭವನಕ್ಕೆ 10 ಲಕ್ಷ ರೂ ಕೊಡುತ್ತೇನೆ ಎಂದು ಘೋಷಿಸಿದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಗಂಗಾಮತಸ್ಥ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಈಗಾಗಲೇ ಸಚಿವ ಸಂಪುಟದಲ್ಲಿ ಚರ್ಚೆಯಾಗಿದೆ. ಮುಖ್ಯಮಂತ್ರಿಗಳು ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ನಿರ್ಣಯ ಮಾಡಿದ್ದಾರೆ. ಯಾರಿಗೂ ಅನ್ಯಾಯ ಆಗಬಾರದೆಂದ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುತ್ತೇವೆ ಎಂಬ ಮಾಹಿತಿ ಇದೆ. ಸಮುದಾಯ ಭವನಕ್ಕೆ ನನ್ನ ಶಾಸಕತ್ವದ ಅನುದಾನದಲ್ಲಿ 10 ಲಕ್ಷ ರೂ ಕೊಡುತ್ತೇನೆ ಎಂದರು.

ವಿಧಾನ ಪರಿಷತ್ ಸದಸ್ಯ ಕಲಬುರಗಿ ತಿಪ್ಪಣ್ಣ ಕಮಕನೂರು ಮಾತನಾಡಿದರು. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಸಂಘದ ಅಧ್ಯಕ್ಷ ಎಸ್.ರಮೇಶ್, ಮಹಿಳಾ ಘಟಕದ ಅಧ್ಯಕ್ಷೆ ಎಂ.ಎಲ್.ಲಿಂಗರಾಜಮ್ಮ, ಮುಖಂಡರಾದ ಶಿವಕುಮಾರಿ, ಟಿ.ಕೃಷ್ಣಯ್ಯ, ಉಮೇಶ್ ಹಾಡ್ಯ, ಎಂ.ಪಿ.ಶ್ರೀಧರ್ ಇತರರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಆಯೋಜಿಸಿದ್ದ ಮೆರವಣಿಗೆಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು.