ಜಿಲ್ಲೆ

ಆರೋಗ್ಯವೇ ಎಲ್ಲರ ನಿಜವಾದ ಸಂಪತ್ತು...

ಲೊಂಬಾರ್ಡ್​ನ ಡಾ.ಸುಶೀಲ್​ ಜತ್ತನ್ನ ಅಭಿಮತ

ಉಡುಪಿಯಲ್ಲಿ ತಪಾಸಣಾ ಶಿಬಿರ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಜೀವನದಲ್ಲಿ ಏನೇ ಸಂಪಾದಿಸಿದರೂ ಅದು ಭೂಮಿಗೆ ಸಂಬಂಧಿಸಿದ್ದು. ಆದರೆ, ನಮ್ಮೊಂದಿಗೆ ಸದಾ ಇರುವ ದೇಹದ ಆರೋಗ್ಯದ ರಕ್ಷಣೆ ಎಲ್ಲರ ಕರ್ತವ್ಯವಾಗಿದೆ. ಬದುಕಿನಲ್ಲಿ ಎಲ್ಲಕ್ಕಿಂತಲೂ ನಿಜವಾಗಿ ಉತ್ತಮವಾದದ್ದು ಆರೋಗ್ಯ ಸಂಪತ್ತಾಗಿದೆ ಎಂದು ಸಿಎಸ್​ಐ ಲೊಂಬಾರ್ಡ್​ ಸ್ಮಾರಕ ಮಿಷನ್​ ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್​ ಜತ್ತನ್ನ ಅಭಿಮತ ವ್ಯಕ್ತಪಡಿಸಿದರು.

ಉಡುಪಿಯ ಬ್ರಹ್ಮಗಿರಿಯಲ್ಲಿರುವ ಲಯನ್ಸ್​ ಕ್ಲಬ್​ನ ಸಭಾಂಗಣದಲ್ಲಿ ಭಾರತೀಯ ರೆಡ್​ ಕ್ರಾಸ್​ ರಾಜ್ಯ ಮತ್ತು ಉಡುಪಿ ಜಿಲ್ಲಾ ಘಟಕ, ಯೆನಪೋಯ ಮೆಡಿಕಲ್​ ಕಾಲೇಜು, ಲಯನ್ಸ್​ ಕ್ಲಬ್​ ಉಡುಪಿ ಮತ್ತು ಮಿಡ್​ ಟೌನ್​, ಹಿರಿಯ ನಾಗರಿಕ ಸಂಘ ಉಡುಪಿ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರ, ಆಯ್ದ ಬಡ ಫಲಾನುಭವಿಗಳಿಗೆ ಶ್ರವಣ ಸಾಧನಗಳ ಉಚಿತ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು.

ಉಡುಪಿ ಲಯನ್ಸ್​ ಕ್ಲಬ್​ನ ಅಧ್ಯಕ್ಷ ಲೂಯಿಸ್​ ಲೋಬೋ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೆಡ್​ ಕ್ರಾಸ್​ ಸಭಾಪತಿ ಬಸ್ರೂರು ರಾಜೀವ್​ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು. ಯೆನಪೋಯ ವಿಶ್ವ ವಿದ್ಯಾನಿಲಯದ ಡಾ.ವಿನೀತಾ ಅವರ ಕ್ಯಾನ್ಸರ್​ ರೋಗದ ಕುರಿತಾಗಿ ಉಪನ್ಯಾಸ ನೀಡಿದರು.

ರೆಡ್​ ಕ್ರಾಸ್​ ರಾಜ್ಯ ಆಡಳಿತ ಮಂಡಳಿಯ ಸದಸ್ಯ ವಿ.ಜಿ. ಶೆಟ್ಟಿ, ಉಡುಪಿ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಪಿ.ನಾರಾಯಣ ರಾವ್​, ರೆಡ್​ ಕ್ರಾಸ್​ ನಿಕಟಪೂರ್ವ ಖಜಾಂಚಿ ಚಂದ್ರಶೇಖರ್​ ಉಪಸ್ಥಿತರಿದ್ದರು.

ರೆಡ್​ ಕ್ರಾಸ್​ ಕಾರ್ಯದರ್ಶಿ ಡಾ. ಗಣನಾಥ್​ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ರೆಡ್​ ಕ್ರಾಸ್​ ಖಜಾಂಚಿ ರಮಾದೇವಿ ವಂದಿಸಿದರು. ಆಯ್ದ 25 ಫಲಾನುಭವಿಗಳಿಗೆ ಶ್ರವಣ ಸಾಧನ ವಿತರಿಸಲಾಯಿತು. 300ಕ್ಕೂ ಹೆಚ್ಚಿನ ಜನರು ಶಿಬಿರದ ಪ್ರಯೋಜನ ಪಡೆದರು.