ಬೈಂದೂರು: ನಿರ್ಮಾಣ ಹಂತದಲ್ಲಿದ್ದ ಬೈಂದೂರು ಅಗ್ನಿಶಾಮಕ ಠಾಣೆ ಕೆಲಸ ಮುಗಿದಿದ್ದು, ಅನುಷ್ಠಾನ ಇಲಾಖೆಯಾದ ಪೊಲೀಸ್ ಹೌಸಿಂಗ್ ಕಾರ್ಪೋರೇಶನ್‌ನಿಂದ ಅಗ್ನಿಶಾಮಕ ಇಲಾಖೆಗೆ ಕಟ್ಟಡ ಹಸ್ತಾಂತರ ಆಗಿದ್ದು ಶೀಘ್ರ ಹೊಸ ಕಟ್ಟಡದ ಲೋಕಾರ್ಪಣೆ ಆಗಲಿದೆ ಈ ಬಗ್ಗೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸುವಂತೆ ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ ನೀಡಿದರು.
ಬೈಂದೂರು ತಾಲೂಕು ಕಚೇರಿಯಲ್ಲಿ ಅಗ್ನಿಶಾಮಕ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಶೀಘ್ರದಲ್ಲೇ ಬೈಂದೂರು ಅಗ್ನಿಶಾಮಕ ಶಾಶ್ವತ ಠಾಣೆ ಲೋಕಾರ್ಪಣೆ ಮಾಡುವುದಾಗಿ ತಿಳಿಸಿದರು.
ಕುಂದಾಪುರ ತಾಲೂಕಿನ ತ್ರಾಸಿ ಹಾಗೂ ಗಂಗೊಳ್ಳಿ ಆಸುಪಾಸಿನಲ್ಲಿ ಹೊಸದಾಗಿ ಅಗ್ನಿಶಾಮಕ ಠಾಣೆ ಅಗತ್ಯತೆ ಇರುವುದರಿಂದ ಈ ಬಗ್ಗೆ ಇಲಾಖೆಯಿಂದ ಸೂಕ್ತ ನಿವೇಶನಕ್ಕಾಗಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಜಿಲ್ಲಾಧಿಕಾರಿಗಳು ಜಾಗ ನೀಡಿದ ನಂತರ ಆ ಭಾಗದಲ್ಲಿ ಅಗ್ನಿಶಾಮಕ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಮಾಹಿತಿ ನೀಡಿದರು.
ಮಂಗಳೂರು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳು, ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು, ಪೊಲೀಸ್ ಹೌಸಿಂಗ್ ಬೋರ್ಡ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ಬೈಂದೂರು ಅಗ್ನಿಶಾಮಕ ಠಾಣಾಧಿಕಾರಿಗಳು ಉಪಸ್ಥಿತರಿದ್ದರು.