ಜಿಲ್ಲೆ

ಸಂಘಟನೆಗಳಿಂದ ಸಮಾಜಮುಖಿ ಕಾರ್ಯ : ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ

ಸೌಮ್ಯ ಆರ್

ಮೂಲ್ಕಿ: ಯುವ ಸಂಘಟನೆಗಳು ಸಮಾಜಮುಖಿ ಚಿಂತನೆ ಕಾರ್ಯ ನಿರಂತರ ನಡೆಸುತ್ತಿರುವುದು ಶ್ಲಾಘನೀಯ. ಭಾರತದ ಆಧ್ಯಾತ್ಮವನ್ನು ಜಗತ್ತಿಗೆ ಸಾರಿದ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆಯನ್ನು ಯುವ ಜನರಿಗೆ ಉದ್ಯಮಶೀಲತಾ ಕಾರ್ಯಾಗಾರ ನಡೆಸುವ ಮೂಲಕ ಫೌಂಡೇಷನ್ ಸ್ತುತ್ಯರ್ಹ ಕಾರ್ಯ ನಡೆಸಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಶ್ರೀ ಕ್ಷೇತ್ರ ಬಪ್ಪನಾಡುವಿನ ಶ್ರೀ ಅನ್ನಪೂರ್ಣೇಶ್ವರೀ ಸಭಾಂಗಣದಲ್ಲಿ ಮಂಗಳವಾರ ಮೂಲ್ಕಿಯ ಶ್ರೀಕೃಷ್ಣ ಸುಧಾಮ ವೆಲ್‌ಫೇರ್ ಫೌಂಡೇಷನ್ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಯುವ ಸಂಚಲನ ಯೋಜನೆಯಡಿ ಕೇಂದ್ರ ಸರ್ಕಾರದ ನಾನಾ ಸ್ವಉದ್ಯೋಗ ಯೋಜನೆಗಳ ಉಪಯುಕ್ತ ಮಾಹಿತಿ ಶಿಬಿರ ಉದ್ಯಮಶೀಲತಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮೆಂಬರ್ ಆಫ್ ಡಿ ಅರ್ಡರ್ ಆಫ್ ಬ್ರಿಟಿಷ್ ಎಂಪೈರ್ ಪ್ರಶಸ್ತಿ ಪುರಸ್ಕೃತ ಮೂಲ್ಕಿ ಡಾ.ಹಂಸರಾಜ್ ಶೆಟ್ಟಿ ಜಿ.ಎಂ.ಅವರನ್ನು ಫೌಂಡೇಷನ್ ವತಿಯಿಂದ ಸನ್ಮಾನಿಸಲಾಯಿತು.

ಸ್ವ ಉದ್ಯಮ ಮತ್ತು ಉದ್ಯಮಶೀಲತೆ ಕುರಿತು ದೇವರಾಜ್ ಕೆ., ಸತೀಶ್ ಮಾಬೆನ್ ಸ್ವಾವಲಂಬನೆಯ ಬದುಕು, ಹಣಕಾಸು ನಿರ್ವಹಣೆ ಕುರಿತು ಲತೇಶ್ ಬಿ., ಡಾ.ವಸಂತ ಕುಮಾರ್ ಶೆಟ್ಟಿ ಪಶುಸಂಗೋಪನೆ ಮತ್ತು ಗ್ರಾಮ ವಿಕಾಸ, ಯಶಸ್ವಿ ಉದ್ಯಮಿ ಕುರಿತು ಆರ್.ವಿ.ಒಡೆಯರ್ ಕಾರ್ಯಾಗಾರ ನಡೆಸಿಕೊಟ್ಟರು.

ಶ್ರೀ ಕ್ಷೇತ್ರ ಬಪ್ಪನಾಡುವಿನ ಆಡಳಿತ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ, ಮೂಲ್ಕಿ ನ.ಪಂ. ಅಧ್ಯಕ್ಷ ಸತೀಶ್ ಅಂಚನ್, ಮುಂಬೈ ಉದ್ಯಮಿ ಯದುನಾರಾಯಣ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ಸುಂದರ ಶೇರಿಗಾರ್ ಉಪಸ್ಥಿತರಿದ್ದರು.

ಶ್ರೀಕೃಷ್ಣ ಸುಧಾಮ ವೆಲ್‌ಫೇರ್ ಫೌಂಡೇಷನ್ ಅಧ್ಯಕ್ಷ ಸುನಿಲ್ ಆಳ್ವ ಸ್ವಾಗತಿಸಿದರು. ನವೀನ್‌ರಾಜ್ ವಂದಿಸಿದರು. ಸಂತೋಷ್ ನಂಬಿಯಾರ್ ನಿರ್ವಹಿಸಿದರು. ಕಾರ್ಯಾಗಾರದಲ್ಲಿ 125 ಮಂದಿ ಭಾಗವಹಿಸಿದ್ದು, ಪ್ರಮಾಣಪತ್ರ ವಿತರಿಸಲಾಯಿತು.