ಜಿಲ್ಲೆ

ನಾಡಿನ ಮಕ್ಕಳಿಗೆ ಬರುತ್ತಿಲ್ಲ ಕನ್ನಡ ಓದು-ಬರಹ...

ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಆತಂಕ

ಎಕ್​ ಭಾರತ್​- ಶ್ರೇಷ್ಠ ಭಾರತ್​ ಕಾರ್ಯಕ್ರಮ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಬ್ರಿಟಿಷರು ಭಾರತದಿಂದ ತೊಲಗಿದರೂ ಸಹ ಅವರು ಅಳವಡಿಸಿದ್ದ ಮೆಕಾಲೆ ಶಿಕ್ಷಣ ಪದ್ಧತಿ ಇಂದಿಗೂ ಸಹ ಶಾಲಾ ಪಠ್ಯ-ಪುಸ್ತಕದಲ್ಲಿ ಸಾಂಕ್ರಾಮಿಕ ರೋಗದಂತೆ ಹರಡಿಕೊಂಡಿದೆ. ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಕನ್ನಡ ಓದಲು-ಬರೆಯಲು ಬರುತ್ತಿಲ್ಲ. ಕರಾವಳಿ ಕರ್ನಾಟಕದಲ್ಲಿ ಮುಂದಿನ ಕೆಲವೇ ವರ್ಷದಲ್ಲಿ ಶೇ.90ರಷ್ಟು ಕನ್ನಡ ಪ್ರಾಥಮಿಕ ಶಾಲೆಗಳು ಸಂಪೂರ್ಣ ಮುಚ್ಚಿಹೋಗುವ ಸಾಧ್ಯತೆ ಇದೆಯೆಂದು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್​ ಆತಂಕ ವ್ಯಕ್ತಪಡಿಸಿದರು.

ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಭಾರತ- ಭಾರತಿ ಟ್ರಸ್ಟ್​ ಉಡುಪಿ ವತಿಯಿಂದ ಸರ್ದಾರ್​ ವಲ್ಲಭಭಾಯಿ ಪಟೇಲ ಅವರ 150ನೇ ಜನ್ಮದಿನಾಚರಣೆ ನಿಮಿತ್ತ ಏ.20ರಂದು ಆಯೋಜಿಸಿದ್ದ ಎಕ್​ ಭಾರತ್​- ಶ್ರೇಷ್ಠ ಭಾರತ್​' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 ವಾಸ್ತವ ಸಂಗತಿ

ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಯಾವ ಚಿಂತನೆ ಬೆಳೆಸುತ್ತೇವೆಯೋ ಅದು ಮುಂದೆ ರಾಷ್ಟ್ರದ ಚಿಂತನೆಯಾಗಿ ರೂಪುಗೊಳ್ಳುತ್ತದೆ. ನಾವೆಲ್ಲರೂ ವಾಸ್ತವ ಸಂಗತಿ ಅರಿತುಕೊಳ್ಳುವುದು ಬಹಳ ಮುಖ್ಯ. ಈಗಾಗಲೇ ಕನ್ನಡ ಮಾಧ್ಯಮ ಶಾಲೆಗಳೆಲ್ಲ ಮುಚ್ಚುವ ಸ್ಥಿತಿಗೆ ತಲುಪಿದ್ದು, ಅವುಗಳನ್ನು ಉಳಿಸುವುದು ಇಂದು ತುಂಬ ಕಷ್ಟದ ಕಾರ್ಯವಾಗಿದೆ ಎಂದರು.

ವಿಎಚ್​ಪಿ ದಕ್ಷಿಣ ಪ್ರಾಂತದ ಸಂಪರ್ಕ ಪ್ರಮುಖ ಪ್ರೇಮಾನಂದ ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಪ್ರಕಾಶ್ಚಂದ್ರ, ಕಾರ್ಯಕ್ರಮದ ಆಯೋಜಕ ಅರುಣಕುಮಾರ, ಟ್ರಸ್ಟ್​ನ ರಾಜ್ಯ ಸಂಯೋಜಕ ಜಯಂತ ಮಲ್ಪೆ, ಸುಧಾ ಶೆಣೈ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ವಿವಿಧ ಶಾಲಾ ಮಕ್ಕಳು ಹಾಗೂ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.