ಜಿಲ್ಲೆ

ಡಯಾಲಿಸಿಸ್ ಕೇಂದ್ರ ಉದ್ಘಾಟನೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗು ಜಿಲ್ಲೆಯ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ ಮತ್ತು ಸೋಮವಾರಪೇಟೆ ತಾಲೂಕು ಆಸ್ಪತ್ರೆಗೆ ತಲಾ 1.75 ಕೋಟಿ ರೂ., ವಿರಾಜಪೇಟೆ ತಾಲೂಕು ಆಸ್ಪತ್ರೆಗೆ 2 ಕೋಟಿ ರೂ. ಸೇರಿ ಒಟ್ಟು ಸುಮಾರು 5 ಕೋಟಿ ರೂ. ಮೊತ್ತವನ್ನು ಅಭಿವೃದ್ಧಿ ಉದ್ದೇಶಕ್ಕೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟಿçÃಯ ಆರೋಗ್ಯ ಅಭಿಯಾನ ವತಿಯಿಂದ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ಆರಂಬಿಸಲಾಗಿರುವ ‘ಡಯಾಲಿಸಿಸ್ ಘಟಕ’ವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ 3 ಡಯಾಲಿಸಿಸ್ ಯಂತ್ರ ಅಳವಡಿಸಲಾಗಿದೆ. ಇನ್ನೂ ಎರಡು ಯಂತ್ರ ಅಳವಡಿಸಬಹುದಾಗಿದೆ. ಇದಕ್ಕೆ ಸಿಎಸ್‌ಆರ್ ಅಥವಾ ಶಾಸಕರ ನಿಧಿ ಬಳಕೆ ಮಾಡಬಹುದು. ಕುಶಾಲನಗರ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಸಕ್ತ ಬಜೆಟ್‌ನಲ್ಲಿ ಸೇರ್ಪಡೆ ಮಾಡಲು ಪ್ರಯತ್ನಿಸಲಾಗುವುದು.

ಕುಶಾಲನಗರ ನನ್ನ ತಂದೆ ಗುಂಡೂರಾವ್ ಅವರ ಊರು. ಇಲ್ಲಿಂದಲೇ ಅವರು ಶಾಸಕರಾಗಿ ನಂತರ ಮುಖ್ಯಮಂತ್ರಿ ಆದವರು. ನಾನು ಕೂಡ ಇಲ್ಲಿಯೇ ಹುಟ್ಟಿ ಬೆಳೆದವನು. ಹಾಗಾಗಿ ಈ ಊರಿನ ಮೇಲೆ ನನ್ನ ಋಣ ಇದೆ. ಇಲ್ಲಿಗೆ ಎಷ್ಟು ಕೆಲಸ ಮಾಡಿದರೂ ಕಡಿಮೆಯೇ ಎಂದರು.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ರಕ್ತದೊತ್ತಡ ಮತ್ತು ಮಧುಮೇಹ ಮತ್ತಿತರ ರೋಗಗಳಿಗೆ ಡಯಾಲಿಸಿಸ್ ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಘಟಕ ಆರಂಭಿಸುವ ಮೂಲಕ ಹಲವು ವರ್ಷಗಳ ಬೇಡಿಕೆ ಈಡೇರಿಸಲಾಗಿದೆ.

ರಕ್ತದೊತ್ತಡ, ಮಧುಮೇಹದಿಂದ ಹಲವು ರೋಗಗಳಿಗೆ ಸಿಲುಕಬೇಕಾಗುತ್ತದೆ. ಆದ್ದರಿಂದ ರೋಗಗಳನ್ನು ತಡೆಯಲು ಡಯಾಲಿಸಿಸ್ ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಎಲ್ಲರಿಗೂ ಎಲ್ಲೆಡೆ ಆರೋಗ್ಯ ಸೇವೆ ಕಲ್ಪಿಸಲು ಡಯಾಲಿಸಿಸ್ ಘಟಕವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿಯೂ ಆರಂಭಿಸುವAತಾಗಬೇಕು. ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಕೊಡಗು ಬೆಟ್ಟಗುಡ್ಡ ಪ್ರದೇಶವಾಗಿರುವುದರಿಂದ ಹೆಚ್ಚಿನ ವೇತನ ನೀಡುವಂತಾಗಬೇಕು.

ಕೂಡಿಗೆ ಕೈಗಾರಿಕಾ ಪ್ರದೇಶಕ್ಕೆ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಹೆಸರು ಇಡಲು ಚಿಂತಿಸಲಾಗಿದ್ದು, ಗುಂಡೂರಾವ್ ಹೆಸರು ಕುಶಾಲನಗರ ಮತ್ತು ಕೊಡಗು ಜಿಲ್ಲೆಯಲ್ಲಿ ಶಾಶ್ವತವಾಗಿ ಉಳಿಯಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗುವುದು. ಹೆಬ್ಬಾಲೆ ಮತ್ತು ಸುಂಟಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಅವಕಾಶವಿದ್ದು, ಸಚಿವರು ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ತಜ್ಞವೈದ್ಯರು ಕೆಲಸ ನಿರ್ವಹಿಸಲು ಆಸಕ್ತಿ ತೋರಿಸುವಂತಾಗಬೇಕು. ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್ ವೈದ್ಯರನ್ನು ಭರ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಗ್ಯಾರಂಟಿ ಯೋಜನೆಗಳ ಕುಶಾಲನಗರ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ ದಿನೇಶ್ ಗುಂಡೂರಾವ್ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ 2013ರಲ್ಲಿ ಕುಶಾಲನಗರದಲ್ಲಿ ಯುಜಿಡಿ ಕಾಮಗಾರಿ ಆರಂಭವಾಯಿತು. ಅದು ಕಾರ್ಯಾರಂಭ ಮಾಡಲು ಈಗ ಕಾಲ ಕೂಡಿ ಬಂದಿದೆ ಊರಿಗೆ ತೀರಾ ಅಗತ್ಯವಾದ ಡಯಾಲಿಸಿಸ್ ಕೇಂದ್ರ ಈಗ ಬಂದಿದೆ. ಬಸ್ ಡಿಪೋ, ಇಂದಿರಾ ಕ್ಯಾಂಟೀನ್, ನಮ್ಮ ಕ್ಲಿನಿಕ್, ಕುಡಿಯುವ ನೀರು ಯೋಜನೆ ಹೀಗೆ…ಈಗ ಇಲ್ಲಿ ಅಭಿವೃದ್ಧಿ ಸ್ಫೋಟ ಆಗುತ್ತಿದೆ. ಜಿಲ್ಲೆಯ ಆಸ್ಪತ್ರೆಗಳಿಗೆ ಈಗ ಚಿಕಿತ್ಸೆ ಸಿಗುತ್ತಿದೆ ಎಂದು ವ್ಯಾಖ್ಯಾನಿಸಿದರು

ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜಾ ಉತ್ತಪ್ಪ, ಪ್ರಮುಖರಾದ ಕೆ.ಪಿ.ಚಂದ್ರಕಲಾ, ಚಂದ್ರಮೌಳಿ, ಮಂಜುನಾಥ್ ಗುಂಡೂರಾವ್, ನಟೇಶ್ ಗೌಡ ಕೆಡಿಪಿ ಸಭೆಯ ಸದಸ್ಯರಾದ ಸುನಿತಾ, ತಹಸೀಲ್ದಾರ್ ಕಿರಣ್ ಗೌರಯ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕ ಡಾ.ಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾದಿಕಾರಿ ಡಾ.ಸತೀಶ್ ಕುಮಾರ್, ತಾಲೂಕು ವೈದ್ಯಾಧಿಕಾರಿಗಳು ಇತರರು ಇದ್ದರು.