ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಜತೆಗೆ ಸಹಕಾರಿ ತತ್ವಕ್ಕೂ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಲ್ಲದೆ ಕ್ಷೇತ್ರದಲ್ಲಿ ಯಾವುದೇ ನ್ಯೂನತೆ ಬರದಂತೆ ಜನತೆಗೆ ಜವಾಬ್ಧಾರಿಯ ಪಾಠವನ್ನೂ ಕಲಿಸಿದ್ದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿವರ್ಷ ಶೇ.100 ಸಾಲ ಮರುಪಾವತಿ ಆಗುತ್ತಿದೆ ಎಂದರೆ ಸಹಕಾರಿ ಕ್ಷೇತ್ರ ಗ್ರಾಹಕರಿಗೆ ಪಾರದರ್ಶಕ ಸೇವೆ ನೀಡುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ವಾಣಿಜ್ಯ ಕಟ್ಟಡ ’ಉನ್ನತಿ’ ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಘದಿಂದ ಜನಸಾಮಾನ್ಯರ ವ್ಯವಹಾರಗಳಿಗೆ ಹೆಚ್ಚಿನ ಅವಕಾಶ ಸಿಕ್ಕಿದೆ. ಅವಿಭಜಿತ ದಕ ಜಿಲ್ಲೆ ಎಂ.ಎನ್.ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಸಹಕಾರಿ ರಂಗದಲ್ಲಿ ದೇಶವೇ ಗುರುತಿಸುವಂತಹ ಕೆಲಸ ಮಾಡುತ್ತಿದೆ ಎಂದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾರ್ ರೈತ ಸಭಾಭವನ ಹಾಗೂ ಊಟದ ಸಭಾಂಗಣ ಉದ್ಘಾಟಿಸಿ ಮಾತನಾಡಿ, ಸಾಲಗಳನ್ನು ಮಾತ್ರ ನೀಡಲು ಸಹಕಾರಿ ಸಂಘಗಳಿರುವುದಲ್ಲ. ಇಲ್ಲಿನ ಸೇವೆ ವಿವಿಧ ಉದ್ದೇಶಗಳಿಗೆ ಬಳಕೆಯಾಗಲಿ ಎಂಬ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ವಾಣಿಜ್ಯ ಬ್ಯಾಂಕುಗಳು ಸಂಕುಚಿತ ಮನೋಭಾವ ಹೊಂದಿದ್ದರೆ ಸಹಕಾರಿ ರಂಗ ಜನರ ವಿಕಸನಕ್ಕೆ ಕಾರಣವಾಗಿದೆ. ಸಂಸ್ಕೃತಿ, ಭಾಷೆ, ಅಗತ್ಯತೆ ತಿಳಿದಿರುವ ಸಿಬ್ಬಂದಿಯಿಂದ ಸಹಕಾರಿ ಕ್ಷೇತ್ರ ಬೆಳೆಯುತ್ತಿದೆ ಎಂದರು. ಇದೇ ಸಂದರ್ಭ ಸಂಘದ ಈ ಕಟ್ಟಡಕ್ಕೆ ಹತ್ತು ಲಕ್ಷ ರೂ.ಗಳ ದೇಣಿಗೆ ಘೋಷಿಸಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಸಹಕಾರಿ ರಂಗ ನಮ್ಮ ಹಿರಿಯರು ಹಾಕಿದ ಅಡಿಪಾಯವನ್ನು ಗಟ್ಟಿಗೊಳಿಸುತ್ತಿದೆ. ಯುವಜನತೆ ಸಹಕಾರಿ ಸಂಘಗಳತ್ತ ಒಲವು ತೋರಿಸುತ್ತಿದೆ ಎಂಬುದಕ್ಕೆ ಬೆಳ್ತಂಗಡಿ ಸಾಕ್ಷಿಯಾಗಿದ್ದು ಅನೇಕ ಯುವಕರು ಸಹಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಸಂಘದ ಅಧ್ಯಕ್ಷ ಪ್ರೀತಮ್ ಡಿ.ಅಧ್ಯಕ್ಷತೆ ವಹಿಸಿದ್ದರು.
ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ, ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ವಿ.ಪ್ರತಿಮಾ, ಧರ್ಮಸ್ಥಳ ಗ್ರಾಪಂ ಅಧ್ಯಕ್ಷೆ ವಿಮಲಾ, ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಸಂಘದ ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕರು ಉಪಸ್ಥಿತರಿದ್ದರು.
ಸಂಘದ ಸಿಇಒ ಸತೀಶ್ ಹೊಳ್ಳ ಬ್ಯಾಂಕ್ ನಡೆದು ಬಂದ ದಾರಿ ಬಗ್ಗೆ ವಿವರ ನೀಡಿದರು. ಶ್ರೀನಿವಾಸ್ ರಾವ್ ಸ್ವಾಗತಿಸಿದರು. ಉಪನ್ಯಾಸಕ ಮಹಾವೀರ ಜೈನ್ ಹಾಗೂ ಲೋಕೇಶ್ ಶೆಟ್ಟಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮೂರು ನವೋದಯ ತಂಡಗಳ ಉದ್ಘಾಟನೆ 5 ಅತ್ಯುತ್ತಮ ತಂಡಗಳಿಗೆ ಪುರಸ್ಕಾರ ನೀಡಲಾಯಿತು.ಮಾಜಿ ಅಧ್ಯಕ್ಷರು ಮತ್ತು ನಿವೃತ್ತ ಸಿಇಒ, ಕಟ್ಟಡದ ಇಂಜಿನಿಯರ್‌ಗಳನ್ನು ಸನ್ಮಾನಿಸಲಾಯಿತು. ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಪ್ರಸ್ತುತ 4560 ಸದಸ್ಯರು 50.8 ಕೋಟಿ ರೂ.ಪಾಲು ಬಂಡವಾಳ, 68 ಕೋಟಿ ರೂ.ಠೇವಣಿ ಹೊಂದಿದ್ದು, 68.23 ಕೋಟಿ ರೂ. ಸಾಲವನ್ನು ಸದಸ್ಯರಿಗೆ ನೀಡಿದೆ. ಇದುವರೆಗೆ 16 ಅಧ್ಯಕ್ಷರು, 8 ಸಿಇಒಗಳು ಕಾರ್ಯನಿರ್ವಹಿಸಿದ್ದಾರೆ.