ಜಿಲ್ಲೆ

ವೈದ್ಯರಲ್ಲಿ ಕೈಗುಣ, ತಾಳ್ಮೆ ಅತೀ ಅಗತ್ಯ: ಅದಮಾರು ಶ್ರೀ

ಉಡುಪಿ: ವೈದ್ಯರಲ್ಲಿ ಕೈಗುಣ ಮತ್ತು ತಾಳ್ಮೆ ಅತೀ ಅಗತ್ಯ. ಇದರೊಂದಿಗೆ ರೋಗಿಗಳ ಜೊತೆ ಸಹನೆಯಿಂದ ವರ್ತಿಸಿ ಧೈರ್ಯ ತುಂಬಿದಾಗ ಅರ್ಧ ಖಾಯಿಲೆ ವಾಸಿಯಾಗುತ್ತದೆ ಎಂದು ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಆದರ್ಶ ಆಸ್ಪತ್ರೆಯ ಹೃದಯ ಚಿಕಿತ್ಸಾ ವಿಭಾಗದಲ್ಲಿ ಹೃದ್ರೋಗ ತಜ್ಞ ಡಾ. ಸುಹಾಸ್​ ಜಿ.ಸಿ. ಅವರ ಹೊರರೋಗಿ ಕ್ಲಿನಿಕ್​ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಈಗಿನ ಕಾಲದಲ್ಲಿ ಮನುಷ್ಯ ಜೀವನ ಪಶುಗಳಂತಾಗಿದೆ. ಕರು ಬೆಳೆದ ಮೇಲೆ ದನವನ್ನು ತೊರೆಯುವಂತೆ ಕೌಟುಂಬಿಕ ಸಂಬಂಧಗಳು ಶಿಥಿಲವಾಗುತ್ತಿವೆ. ಇಂಥ ಸಂದರ್ಭದಲ್ಲಿ ಅಪ್ಪ ಹಾಕಿಕೊಟ್ಟ ದಾರಿಯಲ್ಲಿ ಮಗ ಸಾಗುತ್ತಿರುವುದು ಇತರರಿಗೆ ಮಾದರಿ. ಸುಹಾಸ್​ ಅವರಿಗೆ ಧನ್ವಂತರಿ ನಾಮಕ ಭಗವಂತನ ಅನುಗ್ರಹವಿರಲಿ. ರೋಗಿಗಳು ಅತ್ಯುತ್ತಮ ಚಿಕಿತ್ಸೆ ಪಡೆದು ಗುಣಮುಖರಾಗಿ ಸಂತೋಷದಿಂದ ತೆರಳುವಂತಹ ವಾತಾವರಣ ಆಸ್ಪತ್ರೆಯಲ್ಲಿ ನಿರ್ಮಾಣವಾಗಲಿ ಎಂದು ಹಾರೈಸಿದರು.

ಹೃದ್ರೋಗ ತಜ್ಞ ಡಾ. ಶ್ರೀಕಾಂತ್​ ಮಾತನಾಡಿ, ದೇಶದಲ್ಲಿ 4 ಮರಣದಲ್ಲಿ 1 ಸಾವು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಯಿಂದ ಸಂಭವಿಸುತ್ತಿದೆ. ಕಳೆದ 10 ವರ್ಷಗಳಲ್ಲಿ ಹೃದಯಾಘಾತ ಹೊಂದಿದವರಲ್ಲಿ ಶೇ. 50ರಷ್ಟು ಮಂದಿ 40ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಹೃದ್ರೋಗ ವಿಭಾಗದಲ್ಲಿ ನವೀನ ಆವಿಷ್ಕಾರಗಳು ಸಂಭವಿಸುತ್ತಿದ್ದು, ಅತ್ಯಾಧುನಿಕ ವ್ಯವಸ್ಥೆಯನ್ನು ಬಳಸಿಕೊಂಡು ಆದರ್ಶ ಆಸ್ಪತ್ರೆಯಲ್ಲಿ ಸಾವಿರಾರು ಜೀವಗಳನ್ನು ಉಳಿಸಲು ಸಾಧ್ಯವಾಗಿದೆ ಎಂದರು. ಹೃದ್ರೋಗ ತಜ್ಞ ಡಾ. ವಿಶುಕುಮಾರ್​ ಬಿ. ಮಾತನಾಡಿದರು. ನಿವೃತ್ತ ಮುಖ್ಯಶಿಕ್ಷಕ ಜಯಣ್ಣ, ಆಸ್ಪತ್ರೆಯ ಸಿ ಇ ಓ ವಿಮಲಾ ಚಂದ್ರಶೇಖರ್​, ಹೃದ್ರೋಗ ತಜ್ಞ ಡಾ. ಸುಹಾಸ್​ ಜಿ.ಸಿ., ಪತ್ನಿ ಡಾ. ರಚನಾ ಉಪಸ್ಥಿತರಿದ್ದರು. ವೈದ್ಯಕಿಯ ನಿರ್ದೇಶಕ ಡಾ. ಜಿ.ಎಸ್​. ಚಂದ್ರಶೇಖರ್​ ಪ್ರಸ್ತಾವನೆಗೈದು, ಸ್ವಾಗತಿಸಿದರು. ಆಸ್ಪತ್ರೆಯ ಡಯಟೀಶಿಯನ್​ ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ವ್ಯವಸ್ಥಾಪಕ ಪ್ರಕಾಶ್​ ಡಿ.ಕೆ. ವಂದಿಸಿದರು.

ಆತ್ಯಾಧುನಿಕ ಸೌಲಭ್ಯ

ವೈದ್ಯಕಿಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಯ ಮೂಲಕ ಗುರುತಿಸಿಕೊಂಡಿರುವ ಆದರ್ಶ ಆಸ್ಪತ್ರೆಯು 200 ಬೆಡ್​ ಗಳ ಸಾಮರ್ಥ್ಯ ಹೊಂದಿದೆ. ಅತ್ಯಾಧುನಿಕ ಸಿ. ಟಿ ಸ್ಕಾ$ನ್​, ಎಂ ಆರ್​ ಐ, ಫಿಲಿಪ್ಸ್​ ಇಂಡಿಯಾ ಲಿಮಿಟೆಡ್​ ಕಂಪನಿಯ ಆಧುನಿಕ ಕ್ಯಾಥ್​ ಲ್ಯಾಬ್​ ಹೊಂದಿದ್ದು, ಆಸ್ಪತ್ರೆಯು ಮೂರು ಮೊಡ್ಯೂಲಾರ್​ ಆಪರೇಷನ್​ ಥಿಯೇಟರ್​ ಸಹಿತ ಎಲ್ಲಾ ರೀತಿಯ ಶಸ್ತ್ರಚಿಕಿತ್ಸೆಗಳಾದ ಬೆನ್​, ಸ್ಪೆ$ನ್​, ಲ್ಯಾಪ್ರೋಸ್ಕೋಪಿಕ್​, ಎಂಡೋಸ್ಕೋಪಿಕ್​, ಇ ಎನ್​ ಟಿ, ಆಥೋರ್ಪೆಡಿಕ್​, ಜನರಲ್​ ಸರ್ಜರಿ, 25 ಹಾಸಿಗೆಗಳ ಸಂಪೂರ್ಣ ಹವಾನಿಯಂತ್ರಿತ ತೀವ್ರ ನಿಗಾ ಘಟಕ, ಸುಸಜ್ಜಿತ ಹವಾನಿಯಂತ್ರಿತ ಹೆರಿಗೆ ಕೊಠಡಿ, ನವಜಾತ ಹಾಗೂ ಮಕ್ಕಳ ತೀವ್ರ ನಿಗಾ ಘಟಕ ಹೊಂದಿದೆ.