ಜಿಲ್ಲೆ

ಉಡುಪಿ ಜಿಲ್ಲಾಸ್ಪತ್ರೆಯಲ್ಲಿದೆ ಉತ್ತಮ ಆರೋಗ್ಯ ಸೇವೆ

ಜಿಲ್ಲಾ ಸರ್ಜನ್​ ಡಾ. ಎಚ್​.ಅಶೋಕ್​ ಮಾಹಿತಿ

ಕರ್ಣಾಟಕ ಬ್ಯಾಂಕ್​ನ ರಕ್ತದಾನ ಶಿಬಿರ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಉತ್ತಮವಾಗಿ ಆರೋಗ್ಯ ಸೇವೆಗಳು ಲಭಿಸುತ್ತಿದ್ದು, ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆಯಿಲ್ಲ. ಕ್ಯಾನ್ಸರ್​ ತಜ್ಞರೂ ಇದ್ದು, ಕಿಮಿಯೋಥೆರಪಿ ಸೌಲಭ್ಯವೂ ಇದೆ. ಎಂಆರ್​ಐ ಹಾಗೂ ಸಿಟಿ ಸ್ಕ್ಯಾನ್​ ವ್ಯವಸ್ಥೆಯೂ ಲಭ್ಯವಿದ್ದು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್​ ಡಾ. ಎಚ್​.ಅಶೋಕ್​ ತಿಳಿಸಿದರು.

ಕರ್ಣಾಟಕ ಬ್ಯಾಂಕ್​ನ 101ನೇ ವರ್ಷದ ಸಂಸ್ಥಾಪಕರ ದಿನದ ನಿಮಿತ್ತ ಉಡುಪಿಯ ಅಂಬಾಗಿಲಿನಲ್ಲಿರುವ ಕರ್ಣಾಟಕ ಬ್ಯಾಂಕ್​ನ ಮುಖ್ಯ ಕಚೇರಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಸ್ಪತ್ರೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಉಡುಪಿ ಗಾಂಧಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಹರಿಶ್ಚಂದ್ರ, ಜಿಲ್ಲಾ ಯುವ ಬ್ರಾಹ್ಮಣ ಪರಿಷತ್​ನ ಅಧ್ಯಕ್ಷ ಚಂದ್ರಕಾಂತ್​ ಕೆ.ಎನ್​. ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸಂದೀಪ್​ ಮಂಜ ಮಾತನಾಡಿದರು. ಪ್ರಾದೇಶಿಕ ಮುಖ್ಯ ಸಹಾಯಕ ಪ್ರಧಾನ ವ್ಯವಸ್ಥಾಪಕ ವಾದಿರಾಜ್​ ಕೆ. ಅಧ್ಯಕ್ಷತೆ ವಹಿಸಿದ್ದರು.

ಆದಿ ಉಡುಪಿ ಶಾಖೆಯ ಹಿರಿಯ ಮುಖ್ಯಸ್ಥ ಚಂದ್ರಶೇಖರ್​ ಆಳ್ವ, ಕಾರ್​ ಸ್ಟ್ರೀಟ್​ ಶಾಖೆಯ ಮುಖ್ಯಸ್ಥ ಪ್ರಶಾಂತ್​, ಅಂಬಾಗಿಲು ಶಾಖೆಯ ಮುಖ್ಯಸ್ಥ ಶಶಿಕಾಂತ್​ ಬಂಗೇರ ಉಪಸ್ಥಿತರಿದ್ದರು. ಕೆಎಂಸಿ ದಂತ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ರಾಮಚಂದ್ರ, ವ್ಯವಸ್ಥಾಪಕ ಮನೋಜ್​ ಕೋಟ್ಯಾನ್​ ಕಾರ್ಯಕ್ರಮ ನಿರ್ವಹಿಸಿದರು. ಅನಂತಪದ್ಮನಾಭ ಸಹಕರಿಸಿದರು.

87 ಯೂನಿಟ್​ ರಕ್ತ ಸಂಗ್ರಹ

ಶಿಬಿರದಲ್ಲಿ ಕರ್ಣಾಟಕ ಬ್ಯಾಂಕ್​ನ ಸಿಂಬ್ಬದಿ, ಅಧಿಕಾರಿಗಳು ಹಾಗೂ ಸಾರ್ವಜನಿಕರು ಸೇರಿ 87 ಯೂನಿಟ್​ ರಕ್ತದಾನ ಮಾಡಿದರು. ಕರ್ಣಾಟಕ ಬ್ಯಾಂಕ್​ನ ನೂರಕ್ಕೂ ಅಧಿಕ ನೌಕರರಿಗೆ ಉಚಿತವಾಗಿ ಇಸಿಜಿ, ಮಧುಮೇಹ ರಕ್ತ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ದಂತ, ಕಣ್ಣು ತಪಾಸಣೆ ನಡೆಸಲಾಯಿತು. ಅಸಾಂಕ್ರಮಿಕ ರೋಗಗಳು ಮತ್ತು ಜೀವನ ಶೈಲಿಯ ಕುರಿತು ಆಪ್ತ ಸಮಾಲೋಚನೆ ನಡೆದವು. ತಂಬಾಕಿನ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಲಾಯಿತು. ಫಿಸಿಯೋಥೆರಪಿ ಸೌಲಭ್ಯವನ್ನೂ ನೀಡಲಾಯಿತು. ನೂರಾರು ಸಾರ್ವಜನಿಕರು ಆರೋಗ್ಯ ತಪಾಸಣೆಯ ಸದುಪಯೋಗ ಮಾಡಿಕೊಂಡರು.